* ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಫ್ತು ಸರಕುಗಳ ಮೇಲೆ ಹೆಚ್ಚುವರಿ ಶೇ 25ರಷ್ಟು ಸುಂಕ ಹೇರಲು ಆದೇಶಿಸಿದ್ದಾರೆ. ಇದರಿಂದ ಸುಂಕದ ಒಟ್ಟು ಪ್ರಮಾಣ ಶೇ 50ಕ್ಕೆ ಏರಲಿದೆ.* ಈ ಕ್ರಮವನ್ನು ಭಾರತ 'ಅನ್ಯಾಯ, ಅಸಮರ್ಥನೀಯ, ಅತಾರ್ಕಿಕ' ಎಂದು ತಿರಸ್ಕರಿಸಿದೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.* ಉಕ್ರೇನ್ ಯುದ್ಧದ ನಂತರ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡುತ್ತಿದ್ದರಿಂದ, ಭಾರತ ತನ್ನ ಇಂಧನ ಭದ್ರತೆಗೆ ಗಮನ ನೀಡಿ ಖರೀದಿಯನ್ನು ಮುಂದುವರೆಸಿದೆ. 2021ರ ವರೆಗೆ ರಷ್ಯಾದ ಪಾಲು ಕೇವಲ ಶೇ 0.2 ಇದ್ದರೂ, ಈಗ ಅದು ಪ್ರಮುಖ ತೈಲ ಪೂರೈಕೆದಾರವಾಗಿದೆ.* ₹7.5 ಲಕ್ಷ ಕೋಟಿ ಮೌಲ್ಯದ ರಫ್ತುಮಾಲುಗಳಿಗೆ ಈ ಸುಂಕ ತೀವ್ರ ಹೊಡೆತ ನೀಡಬಹುದು ಎಂಬ ಆತಂಕವನ್ನು ರಫ್ತುದಾರರು ವ್ಯಕ್ತಪಡಿಸಿದ್ದಾರೆ. ಜವಳಿ, ಚರ್ಮ, ಸಾಗರ ಉತ್ಪನ್ನಗಳಿಗೆ ಹೆಚ್ಚಿನ ಪರಿಣಾಮ ಬೀಳಲಿದೆ.* ಭಾರತದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, “ಅಮೆರಿಕ ರಷ್ಯಾದಿಂದ ರಸಗೊಬ್ಬರ ಅಥವಾ ಯುರೇನಿಯಂ ಆಮದು ಮಾಡಿಕೊಳ್ಳುತ್ತದೆಯೇ ಎಂಬುದು ನನಗೆ ಗೊತ್ತಿಲ್ಲ” ಎಂದಿದ್ದಾರೆ. ಇತರ ದೇಶಗಳ ಮೇಲೂ ಇಂಧನ ಆಮದು ಸಂಬಂಧಿತ ಕ್ರಮಗಳನ್ನು ಶೀಘ್ರವೇ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.