* ವಿಶ್ವ ಚಾಂಪಿಯನ್ ದೇಶದ ಡಿ.ಗುಕೇಶ್ರನ್ನು ಟೈ-ಬ್ರೇಕರ್ನಲ್ಲಿ ಮಣಿಸಿದ ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ವರ್ಷದ ಪ್ರಮುಖ ಚೆಸ್ ಟೂರ್ನಿಯಾದ ಟಾಟಾ ಸ್ಟೀಲ್ ಮಾಸ್ಟರ್ಸ್ನಲ್ಲಿ ಚಾಂಪಿಯನ್ ಕಿರೀಟ ಧರಿಸಿ ಅಂತರರಾಷ್ಟ್ರೀಯ ಚೆಸ್ ನಲ್ಲಿ ಭಾರತದ ಪ್ರಾಬಲ್ಯ ಮುಂದುವರೆಸಿದ್ದಾರೆ.* 87ನೇ ಆವೃತ್ತಿಯ ಟೂರ್ನಿಯಲ್ಲಿ 12ನೇ ಸುತ್ತಿನ ನಂತರ ಪ್ರಜ್ಞಾನಂದ ಹಾಗೂ ಗುಕೇಶ್ ತಲಾ 8.5 ಅಂಕ ಸಂಗ್ರಹಿಸಿ ಅಗ್ರ ಸ್ಥಾನ ಹಂಚಿಕೊಂಡಿದ್ದರು. ಗುಕೇಶ್ ಅವರು ಭಾನುವಾರ(ಫೆ.2) 13ನೇ ಹಾಗೂ ಅಂತಿಮ ಸುತ್ತಿನಲ್ಲಿ ಭಾರತದ ಅರ್ಜುನ್ ಇರಿಗೇಶಿ ವಿರುದ್ಧ ಸೋತರು.* ನಂತರ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಲು ಪ್ರಜ್ಞಾನಂದಗೆ ಕೊನೆಯ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಕೇವಲ ಡ್ರಾ ಸಾಧಿಸುವ ಅಗತ್ಯವಿತ್ತು. ಆದರೆ, ಜರ್ಮನಿಯ ಚೆಸ್ ತಾರೆ ವಿನ್ಸೆಂಟ್ ಅವರು ಪ್ರಜ್ಞಾನಂದ ವಿರುದ್ಧ ಜಯ ಸಾಧಿಸಿದರು. ಆಗ ಗುಕೇಶ್ಗೆ ಮತ್ತೊಂದು ಅವಕಾಶ ಲಭಿಸಿತು.* ಸ್ಕೋರ್ ಸಮನಾದ ಕಾರಣ ಅಲ್ಪಾವಧಿಯ ಟೈ-ಬ್ರೇಕರ್ ಜಾರಿಗೊಳಿಸಲಾಯಿತು. ಚೆನ್ನೈನ ಆಟಗಾರರಿಬ್ಬರ ನಡುವೆ ನಡೆದ ಪೈಪೋಟಿಯಲ್ಲಿ ಪ್ರಜ್ಞಾನಂದ ಅವರು ಗುಕೇಶ್ರನ್ನು 2-1 ಅಂತರದಿಂದ ಮಣಿಸಿದರು.* ಮೊದಲ ಎರಡು ಗೇಮ್ಗಳಲ್ಲಿ ಇಬ್ಬರೂ ಒಂದೊಂದು ಗೆದ್ದರು. 2ನಿ.30 ಸೆಕೆಂಡುಗಳ ‘ಸಡನ್ ಡೆತ್‘ ಪಂದ್ಯದಲ್ಲಿ 19 ವರ್ಷ ವಯಸ್ಸಿನ ಪ್ರಜ್ಞಾನಂದ ಜಯಗಳಿಸಿದರು.* ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪ್ರಜ್ಞಾನಂದ ಪಾತ್ರರಾದರು. ಈ ಮೊದಲು ಕೋರಸ್ ಚೆಸ್ ಟೂರ್ನಿ ಎಂಬ ಹೆಸರು ಹೊಂದಿದ್ದ ಈ ಟೂರ್ನಿಯನ್ನು 2003, 2004 ಹಾಗೂ 2006ರಲ್ಲಿ ಆನಂದ್ ಗೆದ್ದುಕೊಂಡಿದ್ದರು. 1989 ಹಾಗೂ 1998ರಲ್ಲಿ ಅವರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.