* ದಕ್ಷಿಣದ ಪ್ರಯಾಗ’ ಎಂದೇ ಪ್ರಸಿದ್ಧಿ ಪಡೆದಿರುವ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸೋಮವಾರ (ಫೆ.10) ಆರಂಭವಾದ ಮೂರು ದಿನಗಳ 13 ನೇ ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.* ತಿ.ನರಸೀಪುರದಲ್ಲಿ 6 ವರ್ಷದ ಬಳಿಕ ಕುಂಭಮೇಳ ನಡೆಯುತ್ತಿದ್ದು, ಕಾವೇರಿ,ಕಪಿಲಾ ಹಾಗೂ ಗುಪ್ತಗಾಮಿನಿ ಸ್ಪಟಿಕ ನದಿ ಸಂಗಮದಲ್ಲಿ ಮೊದಲ ದಿನವೇ ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿದರು.* ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಕೈಲಾಸಾನಂದ ಮಠದ ಜಯೇಂದ್ರಪುರಿ ಸ್ವಾಮೀಜಿ, ತಿರುಚ್ಚಿಯ ಶ್ರೀಬುದ್ಧ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ನಡುಹೊಳೆ ಬಸಪ್ಪನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರು.* ಫೆ. 11 ರಂದು ತಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ, ನವಗ್ರಹ ಹೋಮ, ಸುದರ್ಶನ ಹೋಮ, ಧರ್ಮಸಭೆ ಮತ್ತು ಮಹಾತ್ಮರ ಪ್ರವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಕೂಡ ಆಯೋಜಿಸಲಾಗಿದೆ.* 12 ರಂದು ಪವಿತ್ರ ಕುಂಭಸ್ನಾನ ನಡೆಯಲಿದ್ದು, ಸಪ್ತ ನದಿಗಳಿಂದ ತಂದ ತೀರ್ಥಗಳನ್ನು ಸಂಗಮದಲ್ಲಿ ಸಂಯೋಜಿಸಲಾಗುತ್ತದೆ. ‘ಮಾಘ ಪೂರ್ಣಿಮೆ’ ಪ್ರಯುಕ್ತ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡಲಿದ್ದಾರೆ.