* 'ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಎರಡನೇ ಉಡ್ಡಯನ ಕೇಂದ್ರವನ್ನು ನಿರ್ಮಿಸುವುದು ಶ್ರೀಹರಿಕೋಟಾದಲ್ಲಿನ ಕೇಂದ್ರವನ್ನು ಬದಲಿಸಲು ಅಲ್ಲ. ಬದಲಿಗೆ ಸಣ್ಣ ರಾಕೆಟ್‌ಗಳು ಮತ್ತು ಉಪಗ್ರಹಗಳ ಉಡ್ಡಯನ ಉತ್ತೇಜಿಸಲು ಪರ್ಯಾಯ ತಾಣವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್. ಸೋಮನಾಥ್ ಅವರು ಜನವರಿ 07 ರಂದು  ತಿಳಿಸಿದರು.* ಸಣ್ಣ ಉಪಗ್ರಹ ಉಡಾವಣಾ ವಾಹನಗಳನ್ನು (ಎಸ್‌ಎಸ್‌ಎಲ್‌ವಿ) ಉಡಾವಣೆ ಮಾಡಲು ಮೀಸಲಾದ ಈ ಹೊಸ ತಾಣವು ಇಸ್ರೋಗೆ ಇಂಧನ ಉಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.* ಕುಲಶೇಖರಪಟ್ಟಿಣಂನ ಉಡ್ಡಯನ ಕೇಂದ್ರದಿಂದ ಉಡಾವಣೆಯಾಗುವ ಉಪಗ್ರಹಗಳು ಶ್ರೀಹರಿಕೋಟಾದಿಂದ ಉಡಾವಣೆ ಮಾಡುವುದಕ್ಕಿಂತ ಭಿನ್ನವಾಗಿ ನೇರವಾಗಿ ದಕ್ಷಿಣದ ಕಡೆಗೆ ಚಲಿಸಬಹುದು. ದಕ್ಷಿಣ ಧ್ರುವದ ಕಡೆಗೆ ಶ್ರೀಲಂಕಾದ ಮೇಲೆ ಹಾರುವುದನ್ನು ತಪ್ಪಿಸಬಹುದಾಗಿದೆ ಎಂದು ಸೋಮನಾಥ್ ಅವರು ಹೇಳಿದ್ದಾರೆ.* ಹೊಸ ಉಡ್ಡಯನ ಕೇಂದ್ರವು ಇಸ್ರೋಗೆ ಹೆಚ್ಚಿನ ಪೇಲೋಡ್ ಸಾಮರ್ಥ್ಯ ನೀಡಲಿದೆ. ಉಡಾವಣೆಗಳಿಗೆ ಕಡಿಮೆ ಸಮಯ ಹಿಡಿಯಲಿದೆ' ಎಂದು ಅವರು ಹೇಳಿದರು. * ತೂತುಕುಡಿ ಜಿಲ್ಲೆಯ ಕುಲಶೇಖರ ಪಟ್ಟಿಣಂ ಮತ್ತು ಸಾತಾಂಕುಳಂ ತಾಲ್ಲೂಕಿನ ಪಡುಕ್ಕಪತ್ತು, ಪಲ್ಲಕುರಿಚಿ ಮತ್ತು ಮಾಥವನ್‌ಕುರಿಚಿ ಗ್ರಾಮಗಳಲ್ಲಿ ಇಸ್ರೋಗೆ ಅಗತ್ಯವಿರುವ 2,300 ಎಕರೆ ಭೂಮಿಯಲ್ಲಿ 2,200 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.