* ಭಾರತದ ಮಹಾನ್ ದಾರ್ಶನಿಕ ಮತ್ತು ಯುವಶಕ್ತಿಯ ಪ್ರೇರಕ ಚಿಂತಕ ಸ್ವಾಮಿ ವಿವೇಕಾನಂದರ 164ನೇ ಜನ್ಮದಿನವನ್ನು (Vivekananda Jayanti) ಸ್ಮರಿಸಲು ಕೇಂದ್ರ ಸರ್ಕಾರವು ಈ ಬಾರಿ ವಿಶಿಷ್ಟ ಸಿದ್ಧತೆ ನಡೆಸಿದೆ. 2026ರ ಜನವರಿ 12ರಂದು ದೇಶಾದ್ಯಂತ ‘ರನ್ ಫಾರ್ ಸ್ವದೇಶಿ’ ಎಂಬ ರಾಷ್ಟ್ರವ್ಯಾಪಿ ಯುವ ಜಾಗೃತಿ ಓಟವನ್ನು ಆಯೋಜಿಸುವಂತೆ ಶಿಕ್ಷಣ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.* ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ದೇಶಪ್ರೇಮ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ 2, 3 ಹಾಗೂ 5 ಕಿಲೋಮೀಟರ್‌ಗಳ ಓಟವನ್ನು ಆಯೋಜಿಸಲಾಗುತ್ತದೆ. ಇದರ ಜೊತೆಗೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಸಾರುವ ಪ್ರೇರಣಾದಾಯಕ ಭಾಷಣಗಳು, ಯುವಕರಿಗೆ ಉತ್ತೇಜನ ನೀಡುವ ಸಂವಾದಗಳು ಹಾಗೂ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಣೆಯಂತಹ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.* ಈ ‘ರನ್ ಫಾರ್ ಸ್ವದೇಶಿ’ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಗಳು, ಎನ್‌ಸಿಸಿ (NCC), ಎನ್‌ಎಸ್‌ಎಸ್ (NSS), ಯುವ ಕ್ಲಬ್‌ಗಳು ಸೇರಿದಂತೆ ವಿವಿಧ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಬಹುದು. ಕಾಲೇಜು ಅವರಣಗಳು, ಶಾಲಾ ಮೈದಾನಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನವರಿ 12ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಸೂಚಿಸಿದೆ.* ಸ್ವಾಮಿ ವಿವೇಕಾನಂದರ “ಯುವಶಕ್ತಿಯೇ ರಾಷ್ಟ್ರದ ಭವಿಷ್ಯ” ಎಂಬ ಸಂದೇಶವನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸುವ ಈ ಕಾರ್ಯಕ್ರಮವು ಯುವಜನರನ್ನು ಸ್ವದೇಶಿ ಚಿಂತನೆ ಹಾಗೂ ರಾಷ್ಟ್ರ ನಿರ್ಮಾಣದ ದಾರಿಯತ್ತ ಪ್ರೇರೇಪಿಸುವ ಮಹತ್ವದ ಹೆಜ್ಜೆಯಾಗಿದೆ.