* ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವು ಸೋಮವಾರ ಅಧಿಕೃತವಾಗಿ ಆರಂಭವಾಯಿತು. ಅಧಿವೇಶನದ ಮೊದಲ ಕಲಾಪದಲ್ಲಿ ಇತ್ತೀಚೆಗೆ ನಿಧನರಾದ ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ, ಮಾಜಿ ಸಚಿವ ಎಚ್. ವೈ. ಮೇಟಿ ಸೇರಿದಂತೆ ಗಣ್ಯರಿಗೆ ಸದನದಲ್ಲಿ ಗೌರವಪೂರ್ವಕ ಸಂತಾಪ ಸೂಚಿಸಲಾಯಿತು.* ಅಧಿವೇಶನದ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಗಳ ಜ್ವಲಂತ ಸಮಸ್ಯೆಗಳು ಸದನದ ಚರ್ಚೆಯ ಕೇಂದ್ರಬಿಂದು ಆಗಲಿವೆ ಎಂದು ಹೇಳಿದರು. ಹಿಂದಿನ ಅಧಿವೇಶನಗಳಲ್ಲಿ ಈ ಭಾಗಗಳ ಸಮಸ್ಯೆಗಳಿಗೆ ಸಾಕಷ್ಟು ಸಮಯ ಮೀಸಲಿಟ್ಟಿರುವುದನ್ನು ಅವರು ಸ್ಮರಿಸಿದರು. 145ನೇ ಅಧಿವೇಶನದಲ್ಲಿ 19 ಮಂದಿ ಪರಿಷತ್ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದು, 151 ಹಾಗೂ 154ನೇ ಅಧಿವೇಶನಗಳಲ್ಲಿಯೂ ಸದಸ್ಯರು ಸಕ್ರಿಯವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.* ಈ ಬಾರಿ ನಡೆಯುತ್ತಿರುವ ಅಧಿವೇಶನದಲ್ಲಿಯೂ ಪ್ರಾದೇಶಿಕ ಅಭಿವೃದ್ಧಿ, ಮೂಲಸೌಕರ್ಯ, ನೀರಾವರಿ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಿಗೆ ವಿಶೇಷ ಮಹತ್ವ ನೀಡಲಾಗುವುದು. ಬುಧವಾರ ಮತ್ತು ಗುರುವಾರ ಎರಡೂ ದಿನಗಳು ಪೂರ್ತಿ ಕಲಾಪವನ್ನು ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗಿದ್ದು, ಈ ಮೂಲಕ ಆ ಭಾಗಗಳ ಜನರ ಧ್ವನಿಯನ್ನು ಸದನದಲ್ಲಿ ಬಲವಾಗಿ ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.