Job Description: ➤ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಸಬಲೀಕರಣದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿತವಾಗಿದೆ. ಭಾರತೀಯ ವಾಯುಸೇನೆಯ (IAF) ಹೆಮ್ಮೆಯ ಅಧಿಕಾರಿ, ಸ್ಕ್ವಾಡ್ರನ್ ಲೀಡರ್ ಸಾನ್ಯಾ (Squadron Leader Saanya) ಅವರು ದೇಶದ ಅತ್ಯುನ್ನತ ಮತ್ತು ಪ್ರತಿಷ್ಠಿತ ‘ಕ್ಯಾಟ್-ಎ’ ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ (Cat-A Qualified Flying Instructor - QFI) ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.➤ ಮಿಲಿಟರಿ ಪೈಲಟ್‌ಗಳಿಗೆ ನೀಡಲಾಗುವ ಅತ್ಯಂತ ಕಠಿಣ ಹಾಗೂ ಅತ್ಯುನ್ನತ ಬೋಧನಾ ರೇಟಿಂಗ್ ಇದಾಗಿದ್ದು, ಸಾನ್ಯಾ ಅವರ ಈ ಸಾಧನೆ ದೇಶದ ರಕ್ಷಣಾ ವಲಯದಲ್ಲಿ ಹೊಸ ಇತಿಹಾಸ ಬರೆದಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಾಯುಸೇನಾ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರಿಗೆ ಈ ಗೌರವವನ್ನು ನೀಡಿ ಸನ್ಮಾನಿಸಿದರು. ➤ ಕ್ಯಾಟ್-ಎ' ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್ (QFI): ಭಾರತೀಯ ವಾಯುಸೇನೆಯಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡುವ ಬೋಧಕರನ್ನು (Instructors) ಅವರ ಸಾಮರ್ಥ್ಯ ಮತ್ತು ಅನುಭವದ ಆಧಾರದ ಮೇಲೆ ಸಿ (Cat-C), ಬಿ (Cat-B) ಮತ್ತು ಎ (Cat-A) ಎಂದು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ. ಇದರಲ್ಲಿ 'ಕ್ಯಾಟ್-ಎ' (Category-A) ಅತ್ಯುನ್ನತ ಮಟ್ಟದ ರೇಟಿಂಗ್ ಆಗಿದೆ. - ಈ ಅರ್ಹತೆ ಪಡೆದ ಬೋಧಕರು ಕೇವಲ ಹೊಸ ಪೈಲಟ್‌ಗಳಿಗೆ (Rookie Pilots) ಮಾತ್ರವಲ್ಲದೆ, ಸಾಮಾನ್ಯ ಪೈಲಟ್‌ಗಳು ಹಾಗೂ ಇತರ ಫ್ಲೈಯಿಂಗ್ ಇನ್ಸ್ಟ್ರಕ್ಟರ್‌ಗಳಿಗೂ ತರಬೇತಿ ಮತ್ತು ಮೌಲ್ಯಮಾಪನ ಮಾಡುವ ಸಂಪೂರ್ಣ ಅರ್ಹತೆ ಹೊಂದಿರುತ್ತಾರೆ. - ತಮಿಳುನಾಡಿನ ಚೆನ್ನೈ ಸಮೀಪವಿರುವ ತಾಂಬರಂ ವಾಯುಸೇನಾ ನೆಲೆಯ ಫ್ಲೈಯಿಂಗ್ ಇನ್ಸ್ಟ್ರಕ್ಟರ್ಸ್ ಸ್ಕೂಲ್ (FIS) ನಲ್ಲಿ ಈ ಕಠಿಣ ತರಬೇತಿ ನಡೆಯುತ್ತದೆ. 22 ವಾರಗಳ ಅತ್ಯಂತ ಕಠಿಣ ಹಾರಾಟ ಮತ್ತು 200 ಕ್ಕೂ ಹೆಚ್ಚು ಗಂಟೆಗಳ ಗ್ರೌಂಡ್ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರವಷ್ಟೇ ಈ ಗೌರವ ಸಿಗುತ್ತದೆ.➤ ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರ ಹಿನ್ನೆಲೆ: ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರು ಜೂನ್ 20, 2015 ರಂದು ಭಾರತೀಯ ವಾಯುಸೇನೆಯ ಫ್ಲೈಯಿಂಗ್ ಬ್ರಾಂಚ್‌ಗೆ ಪೈಲಟ್ ಆಗಿ ನಿಯೋಜನೆಗೊಂಡರು.ಇವರು ವಾಯುಸೇನೆಯಲ್ಲಿ ಅತ್ಯಂತ ಅನುಭವಿ ಟ್ರಾನ್ಸ್‌ಪೋರ್ಟ್ ಪೈಲಟ್ (Transport Pilot) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2017 ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಮತ್ತು ಜೂನ್ 2021 ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಬಡ್ತಿ ಪಡೆದರು. ಇವರ ತಂದೆ ಬ್ರಿಗೇಡಿಯರ್ ಸುನಿಲ್ ಕುಮಾರ್ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿದ್ದು, ಸಾನ್ಯಾ ಅವರ ಪತಿಯೂ ಸಹ ಭಾರತೀಯ ವಾಯುಸೇನೆಯಲ್ಲಿ ಪೈಲಟ್ ಆಗಿದ್ದಾರೆ. ➤ ವಾಯುಸೇನೆಯ 93 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಈ ಹಿಂದೆ ಅಕ್ಟೋಬರ್ 2025 ರಲ್ಲಿ ರಫೇಲ್ ಯುದ್ಧವಿಮಾನದ ಪೈಲಟ್ ಆದ ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಅವರು ಕಠಿಣ ತರಬೇತಿ ಮುಗಿಸಿ ಕೇವಲ QFI ಬ್ಯಾಡ್ಜ್ ಪಡೆದ ಮೊದಲ ಮಹಿಳಾ ಫೈಟರ್ ಪೈಲಟ್ ಎನಿಸಿಕೊಂಡಿದ್ದರು. ಆದರೆ, ಈಗ ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರು ಇನ್ಸ್ಟ್ರಕ್ಟರ್ ಗ್ರೇಡಿಂಗ್ ವ್ಯವಸ್ಥೆಯ ಅತ್ಯುನ್ನತ ಹಂತವಾದ ‘ಕ್ಯಾಟ್-ಎ’ (Cat-A) ತಲುಪಿ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ.