* ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಸಂಸ್ಕೃತದಿಂದ ಮಾಲವಿಕಾಗ್ನಿಮಿತ್ರಮ್ ಕೃತಿಯನ್ನು ಕನ್ನಡಕ್ಕೆ ‘ವಿದಿಶಾ ಪ್ರಹಸನ’ ಎಂದು ಅನುವಾದಿಸಿದ್ದರು. ಈ ಕೃತಿಗೆ 2024 ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಲಭಿಸಿದೆ.* ರಾಷ್ಟ್ರರಾಜಧಾನಿಯ ರವೀಂದ್ರ ಭವನದಲ್ಲಿ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಮಾಧವ್ ಕೌಶಿಕ್ ಅವರು 2024ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ 21 ಪುಸ್ತಕಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.* ‘ವಿದಿಶಾ ಪ್ರಹಸನ’ ಕವಿ ಕಾಳಿದಾಸನ ‘ಮಾಲವಿಕಾಗ್ನಿಮಿತ್ರಮ್’ ದ ರಂಗಾನುವಾದವಾಗಿದ್ದು, ದೊಡ್ಡಾಟದ ಶೈಲಿ ಮತ್ತು ಗತ್ತುಗಳನ್ನು ಅಳವಡಿಸಿಕೊಂಡ ಮರು ಬರವಣಿಗೆ. ಕಾಳಿದಾಸ ತನ್ನ ಕಾಲದಲ್ಲಿ ಆಸ್ಥಾನದಲ್ಲಿ ಕಂಡ ಮದನಾಟ, ಗುಪ್ತ ಕಾಮವ್ಯವಹಾರ, ಅರಾಜಕತೆ, ಪ್ರಜೆಗಳ ಅಸಹಾಯಕ ಮೌನಗಳನ್ನು ಒಂದು ಸಹಜ ಚಿತ್ರದಂತೆ ಪ್ರಹಸನಾತ್ಮಕವಾಗಿ ಬಿಂಬಿಸುತ್ತಾನೆ. ಈ ಕೃತಿಯಲ್ಲಿ ಈ ಅಂಶವು ವಿಮರ್ಶೆಗೊಳಪಟ್ಟು, ಸಮಕಾಲೀನ ಸಂದರ್ಭದ ಸಾಮಾಜಿಕ, ರಾಜಕೀಯ ಅವಾಂತರಗಳಿಗೆ ಕನ್ನಡಿ ಹಿಡಿಯುತ್ತದೆ.* ಕನ್ನಡ ವಿಭಾಗದ ಲೇಖಕರಾದ ಧರಣೇಂದ್ರ ಕುರಕುರಿ, ಪುಷ್ಪಾ. ಎಚ್. ಎಲ್. ಹಾಗೂ ನ. ಧಾಮೋದರ ಶೆಟ್ಟಿ ಅವರನ್ನು ಒಳಗೊಂಡಿದ್ದ ಆಯ್ಕೆ ಸಮಿತಿಯು ಈ ಕೃತಿಯನ್ನು ಬಹುಮಾನಕ್ಕೆ ಶಿಫಾರಸು ಮಾಡಿದ್ದಾರೆ. * ಪ್ರಶಸ್ತಿಯು ರೂ. 50,000 ಮತ್ತು ತಾಮ್ರ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಯನ್ನು ವಿಶೇಷ ಸಮಾರಂಭದಲ್ಲಿ ವಿಜೇತರಿಗೆ ಪ್ರದಾನ ಮಾಡಲಾಗುವುದು.* ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ 'ಯಾನ' ಕಾದಂಬರಿ ಯನ್ನು ಅನುವಾದಿಸಿದ ಕೆ.ವಿ.ಕುಮಾರನ್ ಅವರಿಗೆ ಮಲಯಾಳ ವಿಭಾಗದಲ್ಲಿ, ಲೇಖಕಿ ಸುಧಾಮೂರ್ತಿ ಅವರ 'ಡಾಲರ್ ಬಹು ಹಿಂದಿ ಕಾದಂಬರಿಯನ್ನು ಭಾಷಾಂತರಿಸಿದ ಲೇಖಕಿ ಶೋಭಾ ಲಾಲ್‌ಚಂದಾನಿ ಅವರಿಗೆ ಸಿಂಧಿ ಭಾಷಾ ವಿಭಾಗದಲ್ಲಿ ಪ್ರಶಸ್ತಿಗಳು ದೊರಕಿವೆ.* ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಅನುವಾದ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ 'ಪ್ರಜಾವಾಣಿ' ಯೊಂದಿಗೆ ಮಾತನಾಡಿದ ಅವರು, 'ಕೃತಿ ಯಲ್ಲಿ ಹಾಡುಗಳನ್ನು ಸ್ವತಃ ಬರೆದಿದ್ದೇನೆ. ರಂಗಕರ್ಮಿ ಚಿದಂಬರ ರಾವ್ ಜಂಬೆ ಅವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನವಾಗಿತ್ತು. ರಂಗಾಯಣದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದರು. ಧಾರವಾಡದಲ್ಲಿ ಎರಡು, ಬೆಂಗಳೂರಿನಲ್ಲಿ ಒಮ್ಮೆ ಪ್ರದರ್ಶನ ನಡೆದಿತ್ತು. ಕನ್ನಡ ಗೊತ್ತಿಲ್ಲದ ಕಲಾ ವಿದರಿಗೆ ಬೆಂಗಳೂರಿನಲ್ಲಿ ಕನ್ನಡ ಕಲಿಸಿ ಪಾತ್ರ ಮಾಡಿಸಲಾಗಿತ್ತು. ಯಾವ ಕೃತಿಯನ್ನೂ ಅನಗತ್ಯವಾಗಿ ಬರೆದಿಲ್ಲ, ಅನುವಾದಿಸಿಲ್ಲ. 'ಎಲ್ಲ ಕೃತಿಗಳನ್ನು ಪ್ರೀತಿಯಿಂದಲೇ ರಚಿಸಿದ್ದೇನೆ. ಬರವಣಿಗೆ ಖುಷಿ ನೀಡುತ್ತದೆ ಎಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.