* ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಹಾಗೂ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಶರಣಬಸವಪ್ಪ ಅಪ್ಪ (90) ಅವರು ಗುರುವಾರ ರಾತ್ರಿ ನಿಧನರಾದರು.* ಅಲ್ಪಕಾಲದ ಅನಾರೋಗ್ಯದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಸಂಜೆ ಮನೆಗೆ ಕರೆದೊಯ್ದ ಕೆಲ ಹೊತ್ತಿನಲ್ಲಿ ಕೊನೆಯುಸಿರೆಳೆದರು.* ಅವರಿಗೆ ಪತ್ನಿ ದಾಕ್ಷಾಯಣಿ ಅಪ್ಪ, ಏಳು ಪುತ್ರಿಯರು, ಒಬ್ಬ ಪುತ್ರ ಹಾಗೂ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಇದ್ದಾರೆ.* ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶರಣಬಸವಪ್ಪ ಅವರು ಶೈಕ್ಷಣಿಕ ಕ್ರಾಂತಿಯನ್ನೂ ಮಾಡಿದ್ದಾರೆ. ಶರಣಬಸವೇಶ್ವರ ವಿಶ್ವವಿದ್ಯಾಲಯ, ಶಾಲೆಗಳು, ಮಹಿಳಾ ಕಾಲೇಜು, ಎಂಜಿನಿಯರಿಂಗ್ ಮತ್ತು ಪದವಿ ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣ ವಿಸ್ತಾರಕ್ಕೆ ಕೊಡುಗೆ ನೀಡಿದರು.* ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ನಂತರ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕಲಬುರಗಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಶ್ರಮಿಸಿ ಸಮಿತಿಯ ಅಧ್ಯಕ್ಷರಾಗಿ ಪ್ರಮುಖ ಪಾತ್ರವಹಿಸಿದ್ದರು.* 1983ರಲ್ಲಿ 8ನೇ ಪೀಠಾಧಿಪತಿಯಾಗಿ ಪದಗ್ರಹಣ ಮಾಡಿದ ನಂತರ ಶಿಕ್ಷಣದ ಗುಣಮಟ್ಟಕ್ಕಾಗಿ ಶ್ರಮಿಸಿದ ಅವರು ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಅನೇಕ ಕಾಲೇಜುಗಳನ್ನು ಆರಂಭಿಸಿದರು.* ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿಯ ಅಧ್ಯಕ್ಷರಾಗಿ ಸಹ ಕಾರ್ಯ ನಿರ್ವಹಿಸಿದರು.