* ಥೈಲ್ಯಾಂಡ್–ಕಾಂಬೋಡಿಯಾ ಗಡಿ ಪ್ರದೇಶದಲ್ಲಿ ಶಾಂತಿಗೆಂದು ರೂಪಿಸಲಾಗಿದ್ದ ಕದನ ವಿರಾಮ ಒಪ್ಪಂದ ಮತ್ತೆ ಉಲ್ಲಂಘನೆಯಾಗಿದ್ದು, ಉಭಯ ದೇಶಗಳ ಮಧ್ಯೆ ತೀವ್ರ ಉದ್ವಿಗ್ನತೆ ಉಂಟಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಲಾಗಿದ್ದ ಒಪ್ಪಂದವಿದ್ದರೂ, ಇತ್ತೀಚೆಗೆ ಥೈಲ್ಯಾಂಡ್ ಕಾಂಬೋಡಿಯಾ ಮೇಲೆ ವೈಮಾನಿಕ ದಾಳಿ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.* ಈ ದಾಳಿಯ ನಂತರ ಗಡಿ ಪ್ರದೇಶದಲ್ಲಿ ಮತ್ತೆ ಗುಂಡಿನ ಚಕಮಕಿ, ವೈಮಾನಿಕ ಚಟುವಟಿಕೆಗಳು ಹೆಚ್ಚಾಗಿದ್ದು, ಉಭಯ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಥೈಲ್ಯಾಂಡ್ ತನ್ನ ದಾಳಿ ಪ್ರತಿದಾಳಿಯೇ ಆಗಿದ್ದು, ಮೊದಲು ಕಾಂಬೋಡಿಯಾ ಸೇನೆ ದಾಳಿ ನಡೆಸಿದ ಪರಿಣಾಮವಾಗಿ ತಮ್ಮ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಇತ್ತ ಕಾಂಬೋಡಿಯಾ ಮಾತ್ರ ಥೈಲ್ಯಾಂಡ್ ಹಲವು ದಿನಗಳಿಂದ ಪ್ರಚೋದನಕಾರಿ ಕ್ರಮಗಳನ್ನು ಕೈಗೊಂಡಿದ್ದು, ಅದರ ಮುಂದುವರಿಕೆಯಾಗಿ ಈ ವೈಮಾನಿಕ ದಾಳಿ ನಡೆದಿದೆ ಎಂದು ಆರೋಪಿಸಿದೆ.* ಈ ಗಡಿ ಸಂಘರ್ಷದಿಂದಾಗಿ ಸಾಮಾನ್ಯ ನಾಗರಿಕರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದು, ಗಡಿ ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಥೈಲ್ಯಾಂಡ್ ಭಾಗದಲ್ಲಿ ಮಾತ್ರವೇ ಸುಮಾರು 35 ಸಾವಿರಕ್ಕೂ ಹೆಚ್ಚು ಜನರನ್ನು ಆಶ್ರಯ ಶಿಬಿರಗಳಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದ್ದು, ಕಾಂಬೋಡಿಯಾದಲ್ಲೂ ಸಾವಿರಾರು ಜನರು ಮನೆಮಠ ತೊರೆದು ಹೋಗುವಂತಾಗಿದೆ.* ಥೈಲ್ಯಾಂಡ್–ಕಾಂಬೋಡಿಯಾ ನಡುವಿನ ಈ ಸಂಘರ್ಷಕ್ಕೆ ಪುರಾತನ ದೇವಾಲಯಗಳ ಹಕ್ಕು ಮತ್ತು ಗಡಿ ರೇಖೆಗಳ ವಿವಾದ ಪ್ರಮುಖ ಕಾರಣವಾಗಿದೆ. ಈ ಪ್ರದೇಶದಲ್ಲಿ ಹಿಂದೆಯೂ ಅನೇಕ ಬಾರಿ ಸಶಸ್ತ್ರ ಸಂಘರ್ಷಗಳು ನಡೆದಿವೆ. ಇತ್ತೀಚೆಗೆ ಜುಲೈ ತಿಂಗಳಲ್ಲಿ ನಡೆದ ಗಡಿ ಹಿಂಸಾಚಾರದಲ್ಲಿ ಅನೇಕರು ಸಾವಿಗೀಡಾಗಿದ್ದು, ಸುಮಾರು ಎರಡು ಲಕ್ಷ ಜನರು ಸ್ಥಳಾಂತರಗೊಂಡಿದ್ದರು. ಆ ಬಳಿಕ ಅಂತಾರಾಷ್ಟ್ರೀಯ ಒತ್ತಡ ಹಾಗೂ ಟ್ರಂಪ್ ಅವರ ಮಧ್ಯಸ್ಥಿಕೆಯಿಂದ ಕದನ ವಿರಾಮ ಘೋಷಿಸಲಾಯಿತು.* ಆದರೆ ಕೆಲವೇ ತಿಂಗಳಲ್ಲಿ ಮತ್ತೆ ಅದೇ ಒಪ್ಪಂದ ಉಲ್ಲಂಘನೆಯಾಗಿರುವುದು ಶಾಂತಿ ಪ್ರಯತ್ನಗಳ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಎತ್ತಿದೆ. ಗಡಿಯಲ್ಲಿನ ಈ ಹೊಸ ಉದ್ವಿಗ್ನತೆ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯಲಿದೆ ಎಂಬ ಆತಂಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮೂಡಿದೆ .