* ಪ್ರತಿ ವರ್ಷ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಬದ್ಧತೆ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಕುರಿತಾಗಿ ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಣೆ ಮಾಡಲಾಗುತ್ತದೆ. * 2025ರ ವಿಶ್ವ ಆತ್ಮಹತ್ಯೆ ತಡೆ ದಿನದ ಥೀಮ್ 'ಆತ್ಮಹತ್ಯೆ ಮೇಲಿನ ನಿರೂಪಣೆಯನ್ನು ಬದಲಾಯಿಸುವುದು - ಸಂಭಾಷಣೆಯನ್ನು ಪ್ರಾರಂಭಿಸುವುದು'( Changing the Narrative on Suicide -Start the Conversation) ಎಂಬುದಾಗಿದೆ.* ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಜೊತೆಯಲ್ಲಿ ಇಂಟರ್ನ್ಯಾಷನಲ್ ಅಸೋಸಿಯೇಶನ್ ಫಾರ್ ಸುಸೈಡ್ ಪ್ರಿವೆನ್ಷನ್ (IASP) ಆಯೋಜಿಸುತ್ತದೆ. ಆತ್ಮಹತ್ಯೆಯನ್ನು ತಡೆಯಬಹುದು ಎಂದು ಜಗತ್ತಿನಾದ್ಯಂತ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.* ಇತ್ತೀಚೆಗಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವವರ ಮನಃ ಪರಿವರ್ತನೆ ಮಾಡಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ.* ವಿಶ್ವ ಆತ್ಮಹತ್ಯೆ ತಡೆ ದಿನವನ್ನು (WSPD) 2003 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ (WHO)ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸೂಸೈಡ್ ಪ್ರಿವೆನ್ಷನ್ ಪ್ರಾರಂಭಿಸಿತು.* ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವರ್ಷ 700,000 ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಪ್ರಪಂಚದಲ್ಲಿನ ಎಲ್ಲ ಆತ್ಮಹತ್ಯೆಗಳ ಪೈಕಿ ಸುಮಾರು ಶೇ. 77 ದಷ್ಟು ಆತ್ಮಹತ್ಯೆಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ (ಎಲ್ಎಂಐಸಿ) ಸಂಭವಿಸುತ್ತವೆ ಎಂದು ಅಂದಾಜಿಸಿದೆ.* ಪ್ರತಿ ವರ್ಷ ಸೆಪ್ಟೆಂಬರ್ 10 ರಂದು WSPD ಆತ್ಮಹತ್ಯೆ ತಡೆಗಟ್ಟುವಿಕೆಯ ಮೇಲೆ ಜಾಗತಿಕ ಗಮನವನ್ನು ಕೇಂದ್ರೀಕರಿಸುತ್ತದೆ, ಆತ್ಮಹತ್ಯೆಗಳನ್ನು ತಡೆಗಟ್ಟಬಹುದು ಎಂಬ ಹಂಚಿಕೆಯ ನಂಬಿಕೆಯೊಂದಿಗೆ ಸಮುದಾಯಗಳು, ಸಂಸ್ಥೆಗಳು ಮತ್ತು ಸರ್ಕಾರಗಳನ್ನು ಒಗ್ಗೂಡಿಸುತ್ತದೆ.* ಸೆಪ್ಟೆಂಬರ್ 4 ರಂದು, ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಆತ್ಮಹತ್ಯೆ ತಡೆ ದಿನಕ್ಕೆ ಸಂಬಂಧಿಸಿದಂತೆ ಒಂದು ವಾರದ ಅಭಿಯಾನವನ್ನು ಪ್ರಾರಂಭಿಸಿದೆ. ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸಲು ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜಿಸುವ ಗುರಿಯೊಂದಿಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಇದನ್ನು ಆರಂಭಿಸಲಾಗಿದೆ.* ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಅಂಕಿಅಂಶಗಳ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಆತ್ಮಹತ್ಯೆಗಳು ಪ್ರಕರಣಗಳು ದಾಖಲಾಗಿರುವುದು ಭಾರತದಲ್ಲಿಯೇ ಎಂದು ಅಂಕಿ ಅಂಶಗಳ ಪ್ರಕಾರ ತಿಳಿದ್ ಬಂದಿದೆ.* ಎನ್ಸಿಆರ್ಬಿ ಅಂಕಿ- ಅಂಶಗಳ ಪ್ರಕಾರ, ಭಾರತದಲ್ಲಿ 2022 ರಲ್ಲಿ 1.71 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು 2021ಕ್ಕೆ ಹೋಲಿಸಿದರೆ ಶೇಕಡಾ 4.2 ರಷ್ಟು ಮತ್ತು 2018ಕ್ಕೆ ಹೋಲಿಸಿದರೆ ಶೇಕಡಾ 27 ರಷ್ಟು ಹೆಚ್ಚಾಗಿದೆ. ಆತ್ಮಹತ್ಯೆಯಿಂದ ಸಾಯುವ ಸುಮಾರು 50 ರಿಂದ 90 ರಷ್ಟು ವ್ಯಕ್ತಿಗಳು ಖಿನ್ನತೆ, ಆತಂಕ ಮತ್ತು ಬೈಪೋಲಾರ್ ಡಿಸಾರ್ಡರ್ ನಂತಹ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ.* ಎನ್ಸಿಆರ್ಬಿ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಾರಾಷ್ಟ್ರದಲ್ಲಿ 1,834 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಂತರದಲ್ಲಿ ಮಧ್ಯಪ್ರದೇಶದಲ್ಲಿ 1,308 ಮತ್ತು ತಮಿಳುನಾಡಿನಲ್ಲಿ 1,246 ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸಂಭವಿಸಿವೆ. 2021 ರಲ್ಲಿ ಒಟ್ಟು 13,089 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು 2020 ರಲ್ಲಿ 12,526 ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗಿಂತ ಹೆಚ್ಚಾಗಿದೆ. ಇವರಲ್ಲಿ 43.49% ವಿದ್ಯಾರ್ಥಿನಿಯರು ಮತ್ತು 56.51% ವಿದ್ಯಾರ್ಥಿಗಳಾಗಿದ್ದಾರೆ. * 2014 ಮತ್ತು 2021 ರ ನಡುವೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಒಟ್ಟು 787 ಸೈನಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.