* ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಅಂದಾಜು ₹ 30 ಲಕ್ಷ ವೆಚ್ಚದಲ್ಲಿ ‘ಚಿಟ್ಟೆ ಪಾರ್ಕ್’ ನಿರ್ಮಿಸುವುದಾಗಿ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.* ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದು, ಬನ್ನೇರುಘಟ್ಟದ ‘ಚಿಟ್ಟೆ ಪಾರ್ಕ್’ ಮಾದರಿ ಅಳವಡಿಕೆಗಾಗಿ ಫೆಬ್ರುವರಿಯಲ್ಲಿ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.* ‘ಚಿಟ್ಟೆ ಪಾರ್ಕ್’ನಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿಗೆ 1,500 ಚದರ ಅಡಿ, ಸಾರ್ವಜನಿಕ ವೀಕ್ಷಣೆಗೆ 5,000 ಚದರ ಅಡಿ ಮೀಸಲಾಗಿದ್ದು, 2025-26ನೇ ಸಾಲಿನಲ್ಲಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣ ಯೋಜಿಸಲಾಗಿದೆ.* ರಂಗನತಿಟ್ಟು ಪಕ್ಷಿಧಾಮದಲ್ಲಿ ಲೈಮ್ ಬಟರ್ಫ್ಲೈ, ಕ್ರಿಮ್ಸನ್ ರೋಸ್, ಕಾಮನ್ ರೋಸ್ ಸೇರಿದಂತೆ ಅಪರೂಪದ ಚಿಟ್ಟೆಗಳನ್ನು ಗುರುತಿಸಲಾಗಿದೆ. ಚಿಟ್ಟೆಗಳ ಆಹಾರಕ್ಕಾಗಿ ನಿಂಬೆ, ಕಿತ್ತಳೆ, ಅಶೋಕ ಮರ, ಸಂಪಿಗೆ ಮೊದಲಾದ ಸಸ್ಯಗಳನ್ನು ಬೆಳಸಲಾಗುತ್ತಿದ್ದು, ಅವು ಲಭ್ಯವಿಲ್ಲದಾಗ ಕೃತಕ ಆಹಾರ ವ್ಯವಸ್ಥೆ ಮಾಡಲಾಗುತ್ತದೆ. 1,500 ಚ.ಅಡಿಯಲ್ಲಿ ಬ್ರೀಡಿಂಗ್ ಸೆಂಟರ್ ನಿರ್ಮಿಸಿ, ಚಿಟ್ಟೆಗಳ ಸಂರಕ್ಷಣೆ ಹಾಗೂ ಪೋಷಣೆ ಕೈಗೊಳ್ಳಲಾಗಿದೆ.* ಹಿಡಕಲ್ ಡ್ಯಾಂನಲ್ಲಿ 2 ಹೆಕ್ಟೇರ್ ವಿಸ್ತೀರ್ಣದ ಚಿಟ್ಟೆ ಪಾರ್ಕ್ (2023–24) ನಿರ್ಮಾಣಗೊಂಡಿದ್ದು, 39 ಚಿಟ್ಟೆ ಪ್ರಭೇದಗಳು ಕಂಡುಬಂದಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 4.86 ಹೆಕ್ಟೇರ್ ಚಿಟ್ಟೆ ಉದ್ಯಾನ (2007) ಅಭಿವೃದ್ಧಿಗೊಂಡಿದ್ದು, 14ಕ್ಕೂ ಹೆಚ್ಚು ಪ್ರಭೇದಗಳ ಸಂತಾನೋತ್ಪತ್ತಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.