* ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಕ್ಯಾನ್ಸರ್ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಮೊದಲ ಸರ್ಕಾರಿ ಕ್ಯಾನ್ಸರ್ ಡೇ ಕೇರ್ ಕೀಮೋಥೇರಪಿ ಯೂನಿಟ್ (Chemotherapy Center) ಅನ್ನು ರಾಯಚೂರಿನಲ್ಲಿರುವ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಓಪೆಕ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ.* ಈ ಹೊಸ ಆಯ್ಕೆ ರಾಜ್ಯದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಸಹಾಯ ಮಾಡಲಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ರಮೇಶ ಬಿ.ಹೆಚ್. ತಿಳಿಸಿದರು.* ವಿಶ್ವ ಕ್ಯಾನ್ಸರ್ ದಿನಾಚರಣೆಯ ಸಂಧರ್ಭದಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ ಮೂರು ಸಾವಿರಕ್ಕೂ ಹೆಚ್ಚು ಜನ ಹೊಸದಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಆರಂಭದ ಹಂತದಲ್ಲಿ ಚಿಕಿತ್ಸೆ ಪಡೆದವರು ಗುಣಮುಖರಾದ್ರೆ, ಸ್ವಲ್ಪ ನಿರ್ಲಕ್ಷ್ಯ ವಹಿಸಿದವರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ.* ರಾಜ್ಯದಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವವರ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ರಾಯಚೂರು 9ನೇ ಸ್ಥಾನದಲ್ಲಿದೆ. 2022ರ ಅಂಕಿ ಸಂಖ್ಯೆಯ ಪ್ರಕಾರ ರಾಜ್ಯದಲ್ಲಿ 87,424 ಜನರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದರೆ, ರಾಯಚೂರಿನಲ್ಲಿ 2,782 ಜನರಲ್ಲಿ ಕಾಣಿಸಿಕೊಂಡಿತ್ತು.* ಹೆಚ್ಚುತ್ತಿರುವ ರೋಗಿಗಳ ಹಿನ್ನೆಲೆ ಈ ಕೇಂದ್ರ ಸ್ಥಾಪಿಸಲಾಗಿದ್ದು, ಶಸ್ತ್ರಚಿಕಿತ್ಸೆ ಮತ್ತು ಕಿಮೋಥೆರಪಿಯಂತಹ ವಿವಿಧ ಕ್ಯಾನ್ಸರ್ ಚಿಕಿತ್ಸೆಗಳು ಲಭ್ಯವಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರ ಬಾಬು ತಿಳಿಸಿದ್ದಾರೆ.* ಗುಟ್ಕಾ, ತಂಬಾಕು ಸೇವನೆಯಿಂದ ಪುರುಷರಲ್ಲಿ 24% ಮತ್ತು ಮಹಿಳೆಯರಲ್ಲಿ 15% ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚು, ಹಾಗೆಯೇ ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗಿದೆ. ಹಿಂದಿನಂತೆ ಇತರ ನಗರಗಳಿಗೆ ತೆರಳಬೇಕಾಗಿಲ್ಲ, ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಈಗಲೇ ಚಿಕಿತ್ಸೆ ಲಭ್ಯವಿದೆ.