* ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ ಮೊದಲ ವಾರ (1ರಿಂದ 7ರವರೆಗೆ) ರಾಷ್ಟ್ರೀಯ ಪೋಷಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಸಪ್ತಾಹವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಉತ್ತಮ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕ ಆಹಾರ ಸೇವನೆ ಎಷ್ಟು ಮುಖ್ಯ ಎಂಬ ಮಹತ್ವದ ಬಗ್ಗೆ ಮಾಹಿತಿ ನೀಡುವುದಾಗಿದೆ. * ರಾಷ್ಟ್ರೀಯ ಪೋಷಕಾಂಶ ಸಪ್ತಾಹ 2025ರ ಧೈಯವಾಕ್ಯ: ಉತ್ತಮ ಜೀವನಕ್ಕಾಗಿ ಪೌಷ್ಟಿಕಯುಕ್ತ ಆಹಾರ ಎಂಬುವುದಾಗಿದೆ. * ಸದೃಢ ದೇಹ ಮತ್ತು ಮನಸ್ಸಿಗೆ ಪೌಷ್ಟಿಕಯುಕ್ತ ಆಹಾರ ಸೇವನೆ ಪ್ರತಿ ವ್ಯಕ್ತಿಗೆ ಅಗತ್ಯವಾಗಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ.* ಮೊದಲ ಬಾರಿಗೆ 1975 ಮಾರ್ಚ್ನಲ್ಲಿ ಅಮೆರಿಕದ ಡಯೆಟಿಕ್ ಅಸೋಸಿಯೇನ್ (ಎಡಿಎ) ಉತ್ತಮ ಪೌಷ್ಟಿಕಾಂಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಪೌಷ್ಟಿಕಾಂಶ ವಾರವನ್ನು ಪ್ರಾರಂಭಿಸಿತು. 1980ರಲ್ಲಿ ಇದನ್ನು ಒಂದು ತಿಂಗಳ ಕಾಲ ಆಚರಿಸಿತು. ಭಾರತದ ಕೇಂದ್ರ ಸರಕಾರ, ಪೌಷ್ಟಿಕಾಂಶದ ಬಗ್ಗೆ ಜನರಿಗೆ ಅರಿವು ಮೂಡಿಸಲು, ಆರೋಗ್ಯಕರ ಮತ್ತು ಸುಸ್ಥಿರ ಜೀವನಶೈಲಿಯನ್ನು ಪ್ರೋತ್ಸಾಹಿಸಲು 1982ರಿಂದ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಆಚರಣೆಯನ್ನು ಆರಂಭಿಸಿತು.* ಅಪೌಷ್ಟಿಕತೆ ಸಮಸ್ಯೆಯಿಂದ ಲಕ್ಷಾಂತರ ಜನರು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಪೌಷ್ಟಿಕಾಂಶಗಳ ಮಾಹಿತಿ ಕೊರತೆಯೇ ಇದಕ್ಕೆ ಕಾರಣ. ಬಹುತೇಕರಲ್ಲಿ ಪೌಷ್ಟಿಕಾಂಶಗಳ ಬಗ್ಗೆ ಜಾಗೃತಿ ಇಲ್ಲ.* ದೇಶದಲ್ಲಿ ಅಪೌಷ್ಟಿಕತೆಯ ಕಾರಣದಿಂದ ಪ್ರತಿ ದಿನ ಸಾವಿರಾರು ಸಂಖ್ಯೆಯ ಮಕ್ಕಳು ಅಸುನೀಗುತ್ತಿದ್ದಾರೆ. ವಿಟಮಿನ್ ಎ, ಕಬ್ಬಿಣ, ಸತು, ಮತ್ತು ಪೋಲಿಕ್ ಆಮ್ಲ ಸೇರಿದಂತೆ ಮತ್ತಿತರ ಪೋಷಕಾಂಶಗಳ ಕೊರತೆಯಿಂದ ಪ್ರತಿ ದಿನ ಸಾವಿರಾರು ಮಕ್ಕಳು ಮೃತಪಡುತ್ತಿದ್ದಾರೆ.