* ವಿಶಾಖಪಟ್ಟಣದ ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್ನ 12ನೇ ಆವೃತ್ತಿಗೆ ಚಾಲನೆ ದೊರೆಯಿತು. * ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು ತಮಿಳ್ ತಲೈವಾಸ್ ಮುಖಾಮುಖಿಯಾಗಲಿದ್ದು, ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪುಣೇರಿ ಪಲ್ಟನ್ ನಡುವೆ ಹಣಾಹಣಿ ನಡೆಯಲಿದೆ.* ಈ ಬಾರಿ 12 ತಂಡಗಳು ಹೊಸ ಆಟಗಾರರ ಸೇರ್ಪಡೆ ಹಾಗೂ ಬದಲಾದ ನಾಯಕತ್ವದೊಂದಿಗೆ ಕಣಕ್ಕಿಳಿಯಲಿವೆ. ಬೆಂಗಳೂರು ಬುಲ್ಸ್ನ್ನು ಅಂಕುಶ್ ರಾಠಿ ಮುನ್ನಡೆಸಲಿದ್ದು, ಇರಾನ್ ಆಟಗಾರರು ಅಹಮದ್ ರೇಝಾ ಮತ್ತು ಅಲಿರೇಝಾ ಪ್ರಮುಖ ಬಲ. ಪುಣೇರಿ ಪಲ್ಟನ್ ಪಂಕಜ್ ಮೋಹಿತೆ, ಗೌರವ್ ಖತ್ರಿ, ಮೋಹಿತ್ ಗೋಯತ್ ಮೊದಲಾದ ಆಟಗಾರರೊಂದಿಗೆ ಬಲಿಷ್ಠವಾಗಿದೆ.* ತೆಲುಗು ಟೈಟನ್ಸ್ ನಾಯಕ ವಿಜಯ್ ಮಲಿಕ್ ಟೂರ್ನಿಯ ಪ್ರತಿಯೊಂದು ಪಂದ್ಯ ಪರೀಕ್ಷೆಯಾಗಲಿದೆ ಎಂದು ಹೇಳಿದ್ದಾರೆ. * ತಮಿಳ್ ತಲೈವಾಸ್ ನಾಯಕ ಪವನ್ ಶೇರಾವತ್, ಅಭಿಮಾನಿಗಳ ಬೆಂಬಲ ಹೆಚ್ಚಿರುವುದರಿಂದ ತಂಡ ಹೆಚ್ಚಿನ ಶ್ರಮದಿಂದ ಸಿದ್ಧವಾಗಿದೆ ಎಂದಿದ್ದಾರೆ.* ಟೂರ್ನಿಯ ಆರಂಭಕ್ಕೂ ಮುನ್ನ 12 ತಂಡಗಳ ನಾಯಕರು 1971ರ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಐಎನ್ಎಸ್ ಕುರ್ಸುರಾ ಸಬ್ಮರೀನ್ ಸಂಗ್ರಹಾಲಯಕ್ಕೆ ಭೇಟಿ ನೀಡಿ ಭಾರತೀಯ ಸಶಸ್ತ್ರ ಪಡೆಗೆ ಗೌರವ ಸಲ್ಲಿಸಿದರು.* ಪಂದ್ಯಗಳು ವಿಶಾಖಪಟ್ಟಣ (ಆಗಸ್ಟ್ 29 – ಸೆಪ್ಟೆಂಬರ್ 11), ಜೈಪುರ (ಸೆಪ್ಟೆಂಬರ್ 12–28), ಚೆನ್ನೈ (ಸೆಪ್ಟೆಂಬರ್ 29 – ಅಕ್ಟೋಬರ್ 10) ಮತ್ತು ನವದೆಹಲಿ (ಅಕ್ಟೋಬರ್ 11–23) ನಗರಗಳಲ್ಲಿ ನಡೆಯಲಿವೆ. ಪ್ಲೇಆಫ್ ಹಾಗೂ ಫೈನಲ್ ಪಂದ್ಯ ಸ್ಥಳವನ್ನು ನಂತರ ಘೋಷಿಸಲಾಗುವುದು.