* ಎಪ್ರಿಲ್ 6ರಂದು ರಾಮನವಮಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ನೂತನ ಪಂಬನ್ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.* ಅತ್ಯಾಧುನಿಕ ಎಂಜಿನಿಯರಿಂಗ್ ತಂತ್ರಜ್ಞಾನ ಹೊಂದಿರುವ ಈ ಸೇತುವೆ ದೇಶದ ಮೊಟ್ಟಮೊದಲ ವರ್ಟಿಕಲ್ ಲಿಫ್ಟ್ ರೈಲು ಸೇತುವೆ ಎಂಬ ಗೌರವ ಪಡೆಯಲಿದೆ. ಹಡಗು ಸಂಚಾರದ ಸಮಯದಲ್ಲಿ ಸೇತುವೆಯು 5 ನಿಮಿಷಗಳಲ್ಲಿ ಗರಿಷ್ಠ 22 ಮೀಟರ್ ಎತ್ತರಕ್ಕೆ ಲಿಫ್ಟ್ ಆಗಿ ಪುನಃ ಮೂಲ ಸ್ಥಿತಿಗೆ ಮರಳುತ್ತದೆ.* ಎಲೆಕ್ಟೋ ಮೆಕ್ಯಾನಿಕಲ್ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವ ಈ ಸೇತುವೆಯನ್ನು ರೈಲ್ ವಿಕಾಸ ನಿಗಮ (ಆರ್ವಿಎನ್ಎಲ್) 535 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ.* ಸೇತುವೆಯ ಮೇಲೆ ರೈಲು ವೇಗವನ್ನು ಗರಿಷ್ಠ ಗಂಟೆಗೆ 75 ಕಿ.ಮೀ. ನಿಗದಿಗೊಳಿಸಲಾಗಿದೆ. 1914ರಲ್ಲಿ ನಿರ್ಮಿಸಲಾದ ಹಳೆಯ ಸೇತುವೆಯ ಮೂಲಕ ರಾಮೇಶ್ವರಂಗೆ ಸಂಪರ್ಕ ಕಲ್ಪಿಸಲಾಗುತ್ತಿತ್ತು, ಆದರೆ ಶಿಥಿಲಗೊಂಡ ಕಾರಣ 2022ರಲ್ಲಿ ಅದರ ಮೂಲಕ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು.* ಹಳೆಯ ಸೇತುವೆಯ ಪಕ್ಕದಲ್ಲೇ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸೇತುವೆಯ ಶಂಕುಸ್ಥಾಪನೆ ನೆರವೇರಿಸಿದರು. ಆದರೆ, ಕೊರೊನಾ ಮಹಾಮಾರಿಯ ಪರಿಣಾಮವಾಗಿ ಕಾಮಗಾರಿಯಲ್ಲಿ ವಿಳಂಬವಾಯಿತು.* 2.5 ಕಿ.ಮೀ ಉದ್ದದ ಈ ಹೊಸ ಸೇತುವೆ ಇದೀಗ ಸಂಪೂರ್ಣ ತಯಾರಾಗಿದ್ದು, ಪ್ರಾಯೋಗಿಕ ರೈಲು ಸಂಚಾರವೂ ಯಶಸ್ವಿಯಾಗಿದೆ.