* ಹೈಕೋರ್ಟ್ ಆದೇಶದಂತೆ ರಾಜ್ಯ ಭದ್ರತಾ ಆಯೋಗಕ್ಕೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರನ್ನು ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.* ಜಾನ್ ಮೈಕೆಲ್ ಕುನ್ಹಾ ಅವರನ್ನು ಭದ್ರತಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿರುವ ಬಗ್ಗೆ ಇದೇ ಜೂನ್ 12ರಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.ಸದಸ್ಯರ ನೇಮಕದ ಬಗ್ಗೆ 2021ರಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಶಿಫಾರಸು ಮಾಡುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು. ಅದರಂತೆ, 2021ರ ಆಗಸ್ಟ್ 21ರಂದು ಮುಖ್ಯ ನ್ಯಾಯಮೂರ್ತಿಗಳು ನ್ಯಾ. ಕುನ್ಹಾ ಅವರ ಹೆಸರು ಶಿಫಾರಸು ಮಾಡಿದ್ದರು. ಇದೀಗ ಸುಮಾರು ನಾಲ್ಕು ವರ್ಷಗಳ ಬಳಿಕ ಸದಸ್ಯರ ನೇಮಕ ಆಗಿದೆ.* ರಾಜ್ಯ ಭದ್ರತಾ ಆಯೋಗಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರಲಿದ್ದು, ಗೃಹ ಸಚಿವರು ಉಪಾಧ್ಯಕ್ಷರಾಗಿರಲಿದ್ದಾರೆ. ವಿಪಕ್ಷ ನಾಯಕ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಾಮನಿರ್ದೇಶಿಸುವ ನಿವೃತ್ತ ನ್ಯಾಯಮೂರ್ತಿ, ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ ಸದಸ್ಯರಾಗಿರಲಿದ್ದಾರೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಆಯೋಗದ ಸದಸ್ಯ ಕಾರ್ಯದರ್ಶಿಗಳಾಗಿರಲಿದ್ದಾರೆ.* ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಜೈಲು ಶಿಕ್ಷೆ ವಿಧಿಸುವ ಮೂಲಕ ನ್ಯಾ. ಮೈಕಲ್ ಕುನ್ಹಾ ಅವರು ದೇಶದ ಗಮನಸೆಳೆದಿದ್ದರು.