* ಗಾಜಾ ಮೇಲಿನ ಇಸ್ರೇಲ್ ದಾಳಿಯಿಂದ ಎರಡೂ ಕೈಗಳನ್ನು ಕಳೆದುಕೊಂಡ ಪ್ಯಾಲೆಸ್ಟೀನ್ ಬಾಲಕನ ಚಿತ್ರವು 2025ರ ‘ವಿಶ್ವದ ವರ್ಷದ ಉತ್ತಮ ಛಾಯಾಚಿತ್ರ’ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ.* ಈ ಫೋಟೋವನ್ನು ಕತಾರ್ನಲ್ಲಿ ನೆಲೆಸಿರುವ ಪ್ಯಾಲೆಸ್ಟೀನ್ ಮೂಲದ ಛಾಯಾಗ್ರಾಹಕಿ ಸಮರ್ ಅಬು ಎಲೌಫ್ ಅವರು ‘ನ್ಯೂಯಾರ್ಕ್ ಟೈಮ್ಸ್’ಗಾಗಿ ಸೆರೆಹಿಡಿದಿದ್ದು, ಚಿತ್ರದಲ್ಲಿ 9 ವರ್ಷದ ಮಹಮ್ಮದ್ ಅಜ್ಜೌರ್ ಬನಿಯನ್ ಧರಿಸಿ, ಎರಡೂ ಕೈಗಳಿಲ್ಲದೆ ಕಾಣಿಸುತ್ತಾನೆ.* ತನ್ನ ಕೈಗಳಿಲ್ಲದಿರುವ ವಾಸ್ತವವನ್ನು ಅರಿತ ಬಾಲಕ, ‘ಅಮ್ಮ, ನಿನ್ನನ್ನು ನಾನು ಹೇಗೆ ಅಪ್ಪಿಕೊಳ್ಳಲಿ?’ ಎಂದು ತಾಯಿಯನ್ನು ಕೇಳಿದ್ದ. ಈ ಮಾತುಗಳನ್ನು ತನ್ನ ತಾಯಿಯೇ ಛಾಯಾಗ್ರಾಹಕಿ ಅಬು ಎಲೌಫ್ ಅವರಿಗೆ ತಿಳಿಸಿದ್ದರು.* 68ನೇ ಸಂಚಿಕೆಯ ಪ್ರತಿಷ್ಠಿತ ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿಗೆ 141 ದೇಶಗಳ 3,778 ಛಾಯಾಗ್ರಾಹಕರು ಒಟ್ಟು 59,320 ಚಿತ್ರಗಳನ್ನು ಸಲ್ಲಿಸಿದ್ದರು.* ಆ ಎಲ್ಲ ಚಿತ್ರಗಳ ನಡುವೆ ಈ ಒಂದು ಮಾತ್ರ ಅತ್ಯಂತ ಪ್ರಭಾವ ಬೀರುವಂತಿದ್ದು, ಒಂದು ಬಾಲಕನ ದುಃಖಭರಿತ ಕಥೆಯನ್ನು ಹೇಳುತ್ತದೆ. ಜೊತೆಗೆ, ಯುದ್ಧವು ತಲೆಮಾರುಗಳವರೆಗೆ ತನ್ನ ಪರಿಣಾಮವನ್ನು ಬೀರಬಹುದು ಎಂಬುದನ್ನು ಈ ಚಿತ್ರ ಬಿಂಬಿಸುತ್ತದೆ ಎಂದು ವಿಶ್ವ ಪ್ರೆಸ್ ಫೋಟೋ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಜೌಮಾನ ಎಲ್ ಝೀನ್ ಖೌರಿ ಹೇಳಿದರು.