Job Description: * ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಪ್ರಧಾನ ಮಂತ್ರಿ ಧನ–ಧಾನ್ಯ ಕೃಷಿ ಯೋಜನೆ’ಗೆ ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆನ್‌ಲೈನ್ ಮೂಲಕ ಚಾಲನೆ ನೀಡಿದರು. ಈ ಯೋಜನೆ ದೇಶದಾದ್ಯಂತ ಹಂತ ಹಂತವಾಗಿ ಜಾರಿಗೊಳ್ಳಲಿದೆ.* ಭಾರತದ ಕೃಷಿ ಕ್ಷೇತ್ರವು ಅಪಾರ ಸಾಮರ್ಥ್ಯ ಹೊಂದಿದ್ದರೂ ಕಡಿಮೆ ಉತ್ಪಾದಕತೆ, ಅಸಮರ್ಪಕ ನೀರಿನ ಬಳಕೆ, ಸಾಲ ಸೌಲಭ್ಯಗಳ ಕೊರತೆ, ಹಾಗೂ ಕೊಯ್ಲೋತ್ತರ ತಂತ್ರಜ್ಞಾನಗಳ ಅಭಾವ ರೈತರ ಅಭಿವೃದ್ಧಿಗೆ ಅಡೆತಡೆ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಈ ಯೋಜನೆಯನ್ನು ರೂಪಿಸಿದೆ.* ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದ್ದು, ಕರ್ನಾಟಕದ ಹಾವೇರಿ, ತುಮಕೂರು, ಚಿತ್ರದುರ್ಗ, ಕೊಪ್ಪಳ, ಗದಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಇದರಡಿ ಒಳಗೊಂಡಿವೆ.👉 ಯೋಜನೆಯ ಮುಖ್ಯ ಗುರಿಗಳು: # ಕೃಷಿ ಉತ್ಪಾದಕತೆ ಮತ್ತು ಬೆಳೆ ವೈವಿಧ್ಯತೆ ಹೆಚ್ಚಿಸುವುದು # ಸುಸ್ಥಿರ ಮತ್ತು ನೈಸರ್ಗಿಕ ಕೃಷಿ ವಿಧಾನಗಳಿಗೆ ಪ್ರೋತ್ಸಾಹ # ಕೊಯ್ಲೋತ್ತರ ಸಂಗ್ರಹಣೆ ಮತ್ತು ನೀರಾವರಿ ಸೌಲಭ್ಯಗಳ ವಿಸ್ತರಣೆ # ರೈತರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯ ಒದಗಿಸುವುದು* ಈ ಯೋಜನೆಯ ವಿಶೇಷತೆಯೆಂದರೆ 11 ಕೇಂದ್ರ ಇಲಾಖೆಗಳ ಯೋಜನೆಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು. ಇದರಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ಮೀನುಗಾರಿಕೆ ಇಲಾಖೆ, ಪಶುಪಾಲನಾ ಇಲಾಖೆ, ಸಹಕಾರ ಸಚಿವಾಲಯ, ಜಲ ಸಂಪನ್ಮೂಲ ಇಲಾಖೆ, ಆಹಾರ ಸಂಸ್ಕರಣೆ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಭೂ ಸಂಪನ್ಮೂಲ ಇಲಾಖೆ, ಕುಶಲಾಭಿವೃದ್ಧಿ ಸಚಿವಾಲಯ ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯಗಳು ಸೇರಿವೆ.* ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷರಾಗಿರಲಿದ್ದಾರೆ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿ ಆರಂಭದಲ್ಲಿ ಸಮೀಕ್ಷೆ ನಡೆಸಿ, ನಂತರ ಬೆಳೆ ವೈವಿಧ್ಯತೆ, ಮಣ್ಣು ಸಂರಕ್ಷಣೆ, ಕೊಯ್ಲೋತ್ತರ ತಂತ್ರಜ್ಞಾನ, ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ಒತ್ತು ನೀಡಲಿದೆ. ಇದರ ಮೂಲಕ ರೈತರ ಆದಾಯ ಮತ್ತು ಜೀವನೋಪಾಯದಲ್ಲಿ ಸುಧಾರಣೆ ತರಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.