* ಪಹಲ್ಗಾಮ್ ದಾಳಿಯ ನಂತರ ಭದ್ರತಾ ಪಡೆಗಳು ಉಗ್ರರ ಪರಶೋಧನೆಗೆ ಕ್ರಮ ಕೈಗೊಂಡಿದ್ದು, ಶನಿವಾರ (ಏಪ್ರಿಲ್ 26) ಕಾಶ್ಮೀರ ಕಣಿವೆಯಲ್ಲಿ ಮೂವರು ಶಂಕಿತ ಉಗ್ರರ ಮನೆಗಳನ್ನು ಕೆಡವಲಾಗಿದೆ.* ಅಧಿಕಾರಿಗಳ ಪ್ರಕಾರ, ಶುಕ್ರವಾರ ರಾತ್ರಿ ಪುಲ್ವಾಮಾ ಜಿಲ್ಲೆಯ ಮುರಾನ್ ಪ್ರದೇಶದಲ್ಲಿ ಶಂಕಿತ ಉಗ್ರ ಅಹ್ಸಾನ್ ಉಲ್ ಹಕ್ ಶೇಖ್ನ ಮನೆಯ ಮೇಲೆ ಕಾರ್ಯಾಚರಣೆ ನಡೆಸಿ ಅದನ್ನು ನಾಶಪಡಿಸಲಾಗಿದೆ.* ಈತನು 2018ರಲ್ಲಿ ಪಾಕಿಸ್ತಾನದಲ್ಲಿ ಉಗ್ರ ತರಬೇತಿ ಪಡೆದು ಇತ್ತೀಚೆಗೆ ಕಣಿವೆಗೆ ನುಸುಳಿದ್ದಾನೆ ಎಂಬ ಮಾಹಿತಿ ದೊರೆತಿದೆ.* ಶೋಪಿಯಾನ್ ಜಿಲ್ಲೆಯ ಚೋಟಿಪೋರಾದಲ್ಲಿಯೂ ಇದೇ ರೀತಿಯ ಕಾರ್ಯಾಚರಣೆ ನಡೆದಿದ್ದು, ಲಷ್ಕರ್-ಎ-ತಯಬಾ ಸಂಘಟನೆಯ ಹಿರಿಯ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟಾಯನ ನಿವಾಸವನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ.* ಕುಟ್ಟಾಯ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಸಕ್ರಿಯನಾಗಿದ್ದು, ಹಲವು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.* ಕುಲ್ಗಾಮ್ ಜಿಲ್ಲೆಯ ಮಾತಲ್ಹಾಮಾ ಪ್ರದೇಶದಲ್ಲಿ 2023ರಿಂದ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಜಾಕಿರ್ ಅಹ್ಮದ್ ಗನಿಯ ಮನೆ ಕೂಡಾ ಶುಕ್ರವಾರ ರಾತ್ರಿ ಭದ್ರತಾ ಪಡೆಗಳಿಂದ ಧ್ವಂಸಗೊಳಿಸಲಾಗಿದೆ ಎಂದು ಹೇಳಲಾಗಿದೆ.* ಈ ಮೊದಲು ಗುರುವಾರ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಭಾಗಿಯಾಗಿರುವೆಂದು ಶಂಕೆ ಇರುವ ಲಷ್ಕರ್-ಎ-ತಯಬಾ ಸಂಘಟನೆಯ ಇಬ್ಬರು ಉಗ್ರರ ಮನೆಗಳಲ್ಲೂ ಶೋಧ ನಡೆಸುವ ವೇಳೆ ಸ್ಫೋಟಕಗಳು ಪತ್ತೆಯಾಗಿದ್ದು, ಅವು ಸ್ಫೋಟಗೊಂಡು ಮನೆಗಳು ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.