* ಫೆಬ್ರವರಿಯಲ್ಲಿ ದೇಶಿಯ ಬಳಕೆಯ ಹೆಚ್ಚಳದಿಂದ ಒಟ್ಟು ಜಿಎಸ್ಟಿ ಸಂಗ್ರಹ ಶೇ.9.1ರಷ್ಟು ಹೆಚ್ಚಾಗಿ ₹1.84 ಲಕ್ಷ ಕೋಟಿ ತಲುಪಿದೆ, ಇದು ಆರ್ಥಿಕ ಪುನಃಶ್ಚೇತನದ ಮುನ್ಸೂಚನೆಯಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.* ಶನಿವಾರ(ಮಾರ್ಚ್ 01) ಬಿಡುಗಡೆಗೊಂಡ ದತ್ತಾಂಶಗಳ ಪ್ರಕಾರ ಒಟ್ಟು ಜಿಎಸ್ಟಿ ಸಂಗ್ರಹ ₹1,83,647 ಕೋಟಿ ಆಗಿದೆ, ಇದರಲ್ಲಿ ₹35,205 ಕೋಟಿ ಕೇಂದ್ರ ಜಿಎಸ್ಟಿ, ₹43,704 ಕೋಟಿ ರಾಜ್ಯ ಜಿಎಸ್ಟಿ, ₹90,870 ಕೋಟಿ ಏಕೀಕೃತ ಜಿಎಸ್ಟಿ ಮತ್ತು ₹13,868 ಕೋಟಿ ಪರಿಹಾರ ಸೆಸ್ ಸೇರಿವೆ.* ಆಮದು ಸಂಗ್ರಹಗಳಿಗೆ ಹೋಲಿಸಿದರೆ ದೇಶಿಯ ಜಿಎಸ್ಟಿ ಆದಾಯದ ಸ್ಥಿರ ಏರಿಕೆ ಆತ್ಮನಿರ್ಭರ ಭಾರತ ನೀತಿಯ ಯಶಸ್ವಿ ಅನುಷ್ಠಾನವನ್ನು ಸೂಚಿಸುತ್ತದೆ.* ಬೃಹತ್ ತಯಾರಿಕೆ ಮತ್ತು ಬಳಕೆ ರಾಜ್ಯಗಳಾದ ಹರ್ಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಜಿಎಸ್ಟಿ ಸಂಗ್ರಹ ಶೇ.10-20ರಷ್ಟು ಏರಿಕೆಯಾಗಿದ್ದು, ತೆಲಂಗಾಣ, ಗುಜರಾತ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಶೇ.1-4ರಷ್ಟು ಮಾತ್ರ ವೃದ್ಧಿಯಾಗಿದೆ. ಕಡಿಮೆ ಬೆಳವಣಿಗೆಯ ಕಾರಣಗಳ ಮೌಲ್ಯಮಾಪನ ಜಿಎಸ್ಟಿ ಸಂಗ್ರಹದ ಹೆಚ್ಚಳದ ಅಂಶಗಳನ್ನು ಅರ್ಥೈಸಲು ಸಹಾಯಕವಾಗುತ್ತದೆ ಎಂದು ಡೆಲಾಯ್ಟ್ ಇಂಡಿಯಾದ ಎಂ.ಎಸ್. ಮಣಿ ತಿಳಿಸಿದ್ದಾರೆ.* ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ(ಎಪ್ರಿಲ್-ಫೆಬ್ರವರಿ) ಒಟ್ಟು ಜಿಎಸ್ಟಿ ಸಂಗ್ರಹ ಶೇ.9.4ರಷ್ಟು ಏರಿಕೆಯೊಂದಿಗೆ 20.13 ಲಕ್ಷ ಕೋಟಿ ರೂ.ಗಳಾಗಿದ್ದರೆ, ನಿವ್ವಳ ಜಿಎಸ್ಟಿ ಸಂಗ್ರಹ ಶೇ.8.6ರಷ್ಟು ಏರಿಕೆಯೊಂದಿಗೆ 17.79 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.* 2025ರ ಫೆಬ್ರವರಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ. ತಲುಪಿದ್ದು, ಇದು 2025ರ ಜನವರಿಯ 1.96 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗಿದೆ. ದೇಶಿಯ ವಹಿವಾಟಿನಿಂದ ಆದಾಯ ಶೇ.10.2ರಷ್ಟು ಹೆಚ್ಚಾಗಿ 1.42 ಲಕ್ಷ ಕೋಟಿ ರೂ.ಗೆ ತಲುಪಿದರೆ, ಆಮದು ಆದಾಯ ಶೇ.5.4ರಷ್ಟು ಏರಿಕೆಯಾಗಿದ್ದು 42,702 ಕೋಟಿ ರೂ. ಆಗಿದೆ.* ಮರುಪಾವತಿಗಳು 20,889 ಕೋಟಿ ರೂ. ತಲುಪಿದ್ದು, ಶೇ.17.3ರಷ್ಟು ಹೆಚ್ಚಾಗಿದೆ. ನಿವ್ವಳ ಸಂಗ್ರಹ ಶೇ.8.1ರಷ್ಟು ಏರಿಕೆಯಿಂದ 1.63 ಲಕ್ಷ ಕೋಟಿ ರೂ.ಗೆ ತಲುಪಿದೆ.