* ಸಮಯಪಾಲನೆಯನ್ನು ಪ್ರಮಾಣೀಕರಿಸುವ ಕ್ರಮದಲ್ಲಿ ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ; ಒಂದೇ ಸಮಯ’ ನೀತಿ ಜಾರಿಗೆ ನಿರ್ಧರಿಸಿದೆ.* ಏಕರೂಪದ ಭಾರತೀಯ ಕಾಲಮಾನ (IST– ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ನಿಗದಿಗೆ ಸಂಬಂಧಿಸಿದಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಕರಡು ಮಾರ್ಗಸೂಚಿ ಪ್ರಕಟಿಸಿದೆ. ಈ ಕುರಿತು ಫೆಬ್ರುವರಿ 14ರ ವರೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. * ದೇಶದಲ್ಲಿ ವಿವಿಧ ಕಾಲಮಾನಗಳು ಗೊಂದಲ ಉಂಟುಮಾಡಬಹುದು. ಅದಕ್ಕಾಗಿ ಒಂದೇ ಸಮಯದ ಮಾನದಂಡವನ್ನು ಅನುಸರಿಸುವ ಕಾನೂನು ಚೌಕಟ್ಟು ರೂಪಿಸಲಾಗುತ್ತಿದೆ. ಇದರೊಂದಿಗೆ ದೇಶದ ದೂರಸಂಪರ್ಕ, ಬ್ಯಾಂಕಿಂಗ್, ರಕ್ಷಣೆ, 5ಜಿ ಸಂಪರ್ಕ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಾರ್ಯಚಟುವಟಿಕೆಗಳು ಸುಲಭವಾಗಲಿದೆ.* ವಾಣಿಜ್ಯ, ಸಾರಿಗೆ, ಆಡಳಿತ, ಕಾನೂನು, ಹಣಕಾಸು ಹಾಗೂ ಅಧಿಕೃತ ದಾಖಲೆಗಳಲ್ಲಿ ಭಾರತೀಯ ಕಾಲಮಾನ ಪದ್ಧತಿ ಏಕರೂಪವಾಗಿ ಅನುಸರಿಸಬೇಕಾಗಿದೆ.* ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಭಾರತೀಯ ಕಾಲಮಾನವನ್ನು ಕಡ್ಡಾಯವಾಗಿ ಬಳಸಬೇಕಾಗಿದೆ. ಇದರಿಂದ ಸೈಬರ್ ಭದ್ರತೆ ಬಲಗೊಳ್ಳಲಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಮತ್ತು ಇಸ್ರೊ ಏಕರೂಪ ಸಮಯ ನಿಗದಿಯಲ್ಲಿ ಸಹಕರಿಸುತ್ತಿವೆ.