* ನೇಪಾಳದ ರಾಜಕೀಯ ಬಿಕ್ಕಟ್ಟಿನ ನಡುವೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ(71) ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ. * ಪ್ರತಿಭಟನಾಕಾರರ ಬೇಡಿಕೆಗಳನ್ನು ಈ ಸರ್ಕಾರ ಈಡೇರಿಸಿ, ಹೊಸ ಚುನಾವಣೆಗಳನ್ನು ನಡೆಸಲಿದೆ ಎಂಬ ವರದಿಗಳು ಹೊರಬಿದ್ದಿವೆ.* ‘ಜೆನ್–ಝೀ’ ಗುಂಪುಗಳ ನೇತೃತ್ವದಲ್ಲಿ ನಡೆದಿದ್ದ ಭಾರಿ ಪ್ರತಿಭಟನೆ, ಅಧ್ಯಕ್ಷ ರಾಮಚಂದ್ರ ಪೌಡೆಲ್ ಹಾಗೂ ಸೇನಾ ಮುಖ್ಯಸ್ಥರ ಮಧ್ಯಸ್ಥಿಕೆಯಿಂದ ಮಧ್ಯರಾತ್ರಿ ಕೊನೆಗೊಂಡಿದೆ. ಪ್ರತಿಭಟನಾಕಾರರು ಕರ್ಕಿ ಅವರ ಹೆಸರನ್ನೇ ಪ್ರಧಾನಿಗಾಗಿ ಪ್ರಸ್ತಾಪಿಸಿದ್ದಾರೆ.* ಪೌಡೆಲ್ ಅವರು ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ನಾಯಕರು ಹಾಗೂ ಸಾಂವಿಧಾನಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಸಂಸತ್ತನ್ನು ವಿಸರ್ಜಿಸುವುದೋ ಅಥವಾ ಅದನ್ನೇ ಮುಂದುವರಿಸುವುದೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.* ಇನ್ನೊಂದೆಡೆ, ಕರ್ಫ್ಯೂ ಸಡಿಲಿಕೆ ಮಾಡಲಾಗಿದ್ದು ಬೆಳಗ್ಗೆ 7ರಿಂದ 11ರವರೆಗೆ ಮಾತ್ರ ಸಾಮಾನ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸಂಜೆವರೆಗೂ ನಿರ್ಬಂಧ ಮುಂದುವರಿಯಲಿದೆ.* ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಯಂತ್ರಣ ವಿರೋಧಿಸಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆ.ಪಿ. ಶರ್ಮಾ ಓಲಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶವ್ಯಾಪಿ ಹಿಂಸಾತ್ಮಕ ಘಟನೆಗಳಲ್ಲಿ ಸಾವಿನ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.* 2012ರಲ್ಲಿ ಭ್ರಷ್ಟಾಚಾರಕ್ಕಾಗಿ ಸಚಿವ ಜಯಪ್ರಕಾಶ್ ಗುಪ್ತ ಅವರನ್ನು ಜೈಲಿಗೆ ಕಳುಹಿಸಿದ ಕರ್ಕಿ, ನೇಪಾಳದ ನ್ಯಾಯಾಂಗದಲ್ಲಿ ಪ್ರಗತಿಪರ ತೀರ್ಪುಗಳ ಮೂಲಕ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳಿಗೆ ದಾರಿ ತೆರೆದಿದ್ದರು.* ಪ್ರತಿಭಟನೆಯಲ್ಲಿ 5,000ಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿ, ಕಠ್ಮಂಡು ಮೇಯರ್ ಬಾಲೆನ್ ಷಾ ಅವರನ್ನು ಮೀರಿ 58.9% ಬೆಂಬಲ ಕರ್ಕಿಗೆ ಸಿಕ್ಕಿತು.* ಬಿರಾಟನಗರದಲ್ಲಿ ಜನಿಸಿದ ಕರ್ಕಿ, 1970ರ ದಶಕದಲ್ಲಿ ಬನಾರಸ್ ಹಿಂದೂ ವಿವಿಯಲ್ಲಿ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಗಂಗಾ ತೀರದ ಜೀವನ ಹಾಗೂ ಅಲ್ಲಿಯ ಶಿಕ್ಷಣ ಅವರು ರಾಜಕೀಯ-ನ್ಯಾಯಾಂಗ ದೃಷ್ಟಿಕೋನ ರೂಪಿಸಿತು.* ಅವರು ಭಾರತವನ್ನು ಸಹೋದರ-ಸಹೋದರಿಯರ ರಾಷ್ಟ್ರವೆಂದು ಕರೆದಿದ್ದು, ಮೋದಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ-ನೇಪಾಳದ ಹತ್ತಿರದ ಸಂಬಂಧಗಳನ್ನು ಶ್ಲಾಘಿಸಿದ್ದಾರೆ.* ಅವರ ಭಾರತ ಪರ ನಿಲುವು, ನೇಪಾಳದ ಅಶಾಂತ ಪರಿಸ್ಥಿತಿಯಲ್ಲಿ ದ್ವಿಪಕ್ಷೀಯ ಸಂಬಂಧಗಳಿಗೆ ಮಹತ್ವದ್ದಾಗಬಹುದು.