➤ ಬಿಹಾರ ರಾಜಕಾರಣದಲ್ಲಿ ದಶಕಗಳ ಕಾಲ 'ಚಾಣಕ್ಯ'ನಂತೆ ಮೆರೆದಿದ್ದ ನಿತೀಶ್ ಕುಮಾರ್ ಅವರ ಆಡಳಿತ ಅಂತ್ಯವಾಗಿದೆ. ಮಂಗಳವಾರ (14-04-2026) ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ನಿತೀಶ್, ಸಕ್ರಿಯ ರಾಜ್ಯ ರಾಜಕಾರಣದಿಂದ ಹಿಂದೆ ಸರಿದು ಕೇಂದ್ರ ರಾಜಕಾರಣದತ್ತ (ರಾಜ್ಯಸಭೆ) ಮುಖ ಮಾಡಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಬಿಜೆಪಿಯ ಚೊಚ್ಚಲ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.➤ ನಿತೀಶ್ ಕುಮಾರ್ ಎಂಬ 'ದಾಖಲೆಗಳ ಸರದಾರ': ಬಿಹಾರದ ರಾಜಕಾರಣದಲ್ಲಿ ಮಿತ್ರಪಕ್ಷಗಳನ್ನು ಬದಲಿಸುವುದರಲ್ಲಿ ಸಿದ್ದಹಸ್ತರೆನಿಸಿಕೊಂಡಿದ್ದ ನಿತೀಶ್ ಕುಮಾರ್, ಬರೋಬ್ಬರಿ 10 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿಶಿಷ್ಟ ದಾಖಲೆ ಹೊಂದಿದ್ದಾರೆ. ಕಳೆದ 20 ವರ್ಷಗಳಿಂದ ಬಿಹಾರದ ಅಭಿವೃದ್ಧಿ ಮತ್ತು ರಾಜಕೀಯ ಸ್ಥಿತ್ಯಂತರಗಳಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು.  ಮಂಗಳವಾರ (14-04-2026)  ಮುಂಜಾನೆ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರೊಂದಿಗೆ ಕೊನೆಯ ಸಂಪುಟ ಸಭೆ ನಡೆಸಿದ ನಿತೀಶ್, ಮಧ್ಯಾಹ್ನ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಆತಾ ಹಸೈನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.➤ "ನಮ್ಮ ಸರ್ಕಾರ ಇಷ್ಟು ವರ್ಷ ನಿರಂತರವಾಗಿ ಜನರ ಸೇವೆ ಮಾಡಿದೆ. ಈಗ ಹೊಸ ಸರ್ಕಾರಕ್ಕೆ ದಾರ ಮಾಡಿಕೊಡುತ್ತಿದ್ದೇನೆ. ನೂತನ ಆಡಳಿತಕ್ಕೆ ನನ್ನ ಸಂಪೂರ್ಣ ಸಹಕಾರವಿರುತ್ತದೆ." - ನಿತೀಶ್ ಕುಮಾರ್ ➤ ಬಿಹಾರದ ಮೊದಲ ಬಿಜೆಪಿ ಸಿಎಂ:ಸಾಮ್ರಾಟ್ ಚೌಧರಿ: ಬಿಹಾರದಲ್ಲಿ ಇದುವರೆಗೆ ಮೈತ್ರಿ ಸರ್ಕಾರದ ಭಾಗವಾಗಿದ್ದ ಬಿಜೆಪಿ, ಇದೀಗ ಮೊದಲ ಬಾರಿಗೆ ಸ್ವತಂತ್ರವಾಗಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿದೆ. 57 ವರ್ಷದ ಸಾಮ್ರಾಟ್ ಚೌಧರಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ 89 ಬಿಜೆಪಿ ಶಾಸಕರು ಸಾಮ್ರಾಟ್ ಚೌಧರಿ ಅವರಿಗೆ ಬೆಂಬಲ ಸೂಚಿಸಿದರು. ಅಲ್ಲದೆ, ಜೆಡಿಯು (JDU) ಪಕ್ಷದ ಶಾಸಕರು ಕೂಡ ಈ ಬದಲಾವಣೆಗೆ ಸಾಥ್ ನೀಡುವ ನಿರೀಕ್ಷೆಯಿದೆ.- ಜನವರಿ 2024: ನಿತೀಶ್ ಕುಮಾರ್ 'ಮಹಾಗಟಬಂಧನ್' ತೊರೆದು ಎನ್‌ಡಿಎ (NDA) ಸೇರಿದ್ದರು.- ನವೆಂಬರ್ 2025 (ಚುನಾವಣೆ): ಎನ್‌ಡಿಎ ಭರ್ಜರಿ ಜಯ ದಾಖಲಿಸಿದ ನಂತರ ಚೌಧರಿ ಅವರಿಗೆ ಗೃಹ ಖಾತೆ ನೀಡಲಾಗಿತ್ತು.- ಏಪ್ರಿಲ್ 2026: ನಿತೀಶ್ ಕುಮಾರ್ ಅವರ ರಾಜೀನಾಮೆಯಿಂದಾಗಿ ಬಿಹಾರದಲ್ಲಿ ಬಿಜೆಪಿ ಯುಗ ಆರಂಭವಾಗಿದೆ.