* ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಕ ಮಾಡಲಾಗಿದ್ದು, ಅವರು ಶುಕ್ರವಾರ(ಆಗಸ್ಟ್ 12) ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.* ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಪ್ರಮಾಣ ವಚನ ಬೋಧಿಸಿದರು. ಕರ್ಕಿ ಅವರ ಸಂಪುಟದಲ್ಲಿ ಇನ್ನೂ ಸಚಿವರನ್ನು ಸೇರಿಸಲಾಗಿಲ್ಲ.* ಈ ಬೆಳವಣಿಗೆಗೆ ಮುನ್ನ, ಭ್ರಷ್ಟಾಚಾರ ಮತ್ತು ನಿರುದ್ಯೋಗ ವಿರೋಧಿಸಿ ಯುವಜನತೆ ನಡೆಸಿದ ಜನರೇಷನ್ ಝಡ್ ಪ್ರತಿಭಟನೆಗಳು ದೇಶವನ್ನು ತೀವ್ರ ತಲ್ಲಣಗೊಳಿಸಿದವು.* ಪ್ರತಿಭಟನೆಯಲ್ಲಿ 51 ಮಂದಿ ಸಾವನ್ನಪ್ಪಿದರು. ಸಾಮಾಜಿಕ ಜಾಲತಾಣ ನಿಷೇಧ, ಸರ್ಕಾರಿ ಕಚೇರಿಗಳು ಮತ್ತು ಸಂಸತ್ ಭವನದ ಮೇಲೆ ದಾಳಿ, ಸಚಿವರ ಮೇಲೆ ಹಲ್ಲೆ ನಡೆದಿತ್ತು.* ಈ ಪರಿಸ್ಥಿತಿಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದರು ಮತ್ತು ಅವರನ್ನು ದೇಶ ತೊರೆಯುವಂತೆ ಒತ್ತಾಯ ವ್ಯಕ್ತವಾಯಿತು. ನಂತರ, ಅಧ್ಯಕ್ಷರು, ಸೇನಾ ಮುಖ್ಯಸ್ಥರು ಮತ್ತು ಪ್ರತಿಭಟನಾ ಪ್ರತಿನಿಧಿಗಳ ಒಮ್ಮತದಿಂದ ಕರ್ಕಿ ಅವರ ಹೆಸರನ್ನು ಮಧ್ಯಂತರ ಪ್ರಧಾನಿಯಾಗಿ ಅಂತಿಮಗೊಳಿಸಲಾಯಿತು.* ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೂಡ ಚರ್ಚೆಯಲ್ಲಿದ್ದರೂ, ಅವರು ಹುದ್ದೆ ವಹಿಸಲು ನಿರಾಕರಿಸಿ ಕರ್ಕಿ ಅವರಿಗೆ ಬೆಂಬಲ ನೀಡಿದರು. ಮುಂದಿನ ಚುನಾವಣೆ ವರೆಗೆ ದೇಶವನ್ನು ಮುನ್ನಡೆಸಲು ಕರ್ಕಿ ನೇತೃತ್ವದ ಹಂಗಾಮಿ ಸರ್ಕಾರ ಕಾರ್ಯನಿರ್ವಹಿಸಲಿದೆ.