* ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಬೆಂಗಳೂರಿನಲ್ಲಿ ನಡೆದ 'ಎನ್ ಕ್ಲಾಸಿಕ್ 2025' ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 86.18 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ಇದು ಅವರ ಹೆಸರಿನಲ್ಲಿ ಆಯೋಜನೆಯಾದ ಮೊದಲ ಸ್ಪರ್ಧೆಯಾಗಿದೆ.* ಈ ಟೂರ್ನಿಗೆ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೆವೆಲ್ ಮಾನ್ಯತೆ ದೊರೆತಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕೂಟ ಆಯೋಜನೆಯಾಗಿದೆ. ಸ್ಪರ್ಧೆ ವೇಳೆ ಎದುರಿನಿಂದ ರಭಸವಾಗಿ ಬೀಸುತ್ತಿದ್ದ ಗಾಳಿಯು ದೊಡ್ಡ ಸವಾಲಾಗಿತ್ತು ಎಂದು ನೀರಜ್ ತಿಳಿಸಿದ್ದಾರೆ.* ಆರಂಭದಲ್ಲಿ ತಾಂತ್ರಿಕ ತೊಂದರೆ ಎದುರಾದರೂ ಕೋಚ್ ಜಾನ್ ಝೆಲೆಜ್ನಿಯ ಸಲಹೆಯಿಂದ ಅವರು ಉತ್ತಮ ಪ್ರದರ್ಶನ ನೀಡಿದ್ದು, ತಮ್ಮ ಮೊದಲ ಥ್ರೋ ಫೌಲ್ ಆದ ಬಳಿಕ ಗಮನ ಕೇಂದ್ರೀಕರಿಸಿದರು.* 15,000ಕ್ಕೂ ಹೆಚ್ಚು ಜನರು ಈ ಕೂಟ ವೀಕ್ಷಿಸಿದ್ದು, ಬೆಂಗಳೂರಿನ ಅಭಿಮಾನಿಗಳು ನೀಡಿದ ಬೆಂಬಲಕ್ಕೆ ನೀರಜ್ ಧನ್ಯವಾದ ಹೇಳಿದ್ದಾರೆ. ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ನೀಡುವಂತೆ ದೇಶವಾಸಿಗಳಿಗೆ ವಿನಂತಿಸಿದರು.* ಈ ಕೂಟದಲ್ಲಿ ಕೆನ್ಯಾದ ಜೂಲಿಯಸ್ ಯಿಗೊ ಬೆಳ್ಳಿ, ಶ್ರೀಲಂಕಾದ ರುಮೇಶ್ ಪತಿರಾ ಕಂಚು ಪದಕ ಗೆದ್ದಿದ್ದಾರೆ. ಈಗ ನೀರಜ್ ಜಾವೆಲಿನ್ ಥ್ರೋ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದು, ಒಟ್ಟು 1,445 ಅಂಕ ಹೊಂದಿದ್ದಾರೆ.