Job Description: ➤ ಭಾರತೀಯ ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಗೆ ಮತ್ತೊಂದು ದೊಡ್ಡ ಮೈಲಿಗಲ್ಲು ಸಿಕ್ಕಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಅದಿತಿ 3.0' (ADITI 3.0) ಯೋಜನೆಯಡಿ, ಭಾರತೀಯ ನೌಕಾಪಡೆಗೆ ಅತ್ಯಾಧುನಿಕ ಹೈ ಪವರ್ ಮೈಕ್ರೋವೇವ್ (HPM - High Power Microwave) ಸಿಸ್ಟಮ್ಗಳನ್ನು ತಯಾರಿಸಿ ಪೂರೈಸುವ ಮಹತ್ವದ ಗುತ್ತಿಗೆಯನ್ನು ಬೆಂಗಳೂರು ಮೂಲದ 'ಟಾನ್‌ಬೊ ಇಮೇಜಿಂಗ್ ಇಂಡಿಯಾ ಲಿಮಿಟೆಡ್' (Tonbo Imaging India) ಕಂಪನಿಗೆ ನೀಡಲಾಗಿದೆ. ➤ 'ಅದಿತಿ' (ADITI) ಯೋಜನೆ: ಕೇಂದ್ರ ರಕ್ಷಣಾ ಸಚಿವಾಲಯದ iDEX ಮತ್ತು DIO ಸಂಸ್ಥೆಗಳ ತಾಂತ್ರಿಕ ಹಾಗೂ ಆರ್ಥಿಕ ನೆರವಿನೊಂದಿಗೆ, ರಕ್ಷಣಾ ವಲಯದಲ್ಲಿ ಅತ್ಯಾಧುನಿಕ ಮತ್ತು ಆಯಕಟ್ಟಿನ ತಂತ್ರಜ್ಞಾನಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ಉತ್ತೇಜನ ನೀಡುವ ಯೋಜನೆಯೇ 'ಅದಿತಿ' (ADITI - Acentuating Development of Advanced Technologies for Innovation) ಆಗಿದೆ.➤ ಹೈ ಪವರ್ ಮೈಕ್ರೋವೇವ್ (HPM) ತಂತ್ರಜ್ಞಾನ: ಎಚ್‌ಪಿಎಂ (HPM) ತಂತ್ರಜ್ಞಾನದಡಿ ಅತ್ಯಂತ ಶಕ್ತಿಶಾಲಿ ವಿದ್ಯುತ್‌ಕಾಂತೀಯ ಕಿರಣಗಳನ್ನು (Electromagnetic Waves) ಹೊರಹೊಮ್ಮಿಸಲಾಗುತ್ತದೆ. ಸಾಮಾನ್ಯವಾಗಿ 100 ಮೆಗಾವಾಟ್‌ಗಿಂತಲೂ ಅಧಿಕ ಶಕ್ತಿ ಹೊಂದಿರುವ ವಿದ್ಯುತ್‌ಕಾಂತೀಯ ಕಿರಣಗಳು, ಶತ್ರು ಪಾಳೆಯದ ಡ್ರೋನ್‌ಗಳು, ಕ್ಷಿಪಣಿಗಳು ಅಥವಾ ನೌಕೆಗಳಲ್ಲಿನ ಮೈಕ್ರೋಚಿಪ್‌ಗಳು, ಸೆನ್ಸರ್‌ಗಳು ಹಾಗೂ ಸಂವಹನ (Communication) ಉಪಕರಣಗಳನ್ನು ಕ್ಷಣಾರ್ಧದಲ್ಲಿ ನಿಷ್ಕ್ರಿಯಗೊಳಿಸುತ್ತವೆ. ಇದು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಶತ್ರುಗಳ ಎಲೆಕ್ಟ್ರಾನಿಕ್ ಸಾಧನಗಳನ್ನು ನಾಶ ಮಾಡುವಾಗ ಯಾವುದೇ ರೀತಿಯ ಭೌತಿಕ ಸ್ಫೋಟ ಸಂಭವಿಸುವುದಿಲ್ಲ ಅಥವಾ ಶತ್ರುಗಳ ಉಪಕರಣಗಳ ಬಾಹ್ಯ ರಚನೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಕೇವಲ ಒಳಗಿನ ಸರ್ಕ್ಯೂಟ್‌ಗಳನ್ನು ಇದು ಜಾಮ್ ಅಥವಾ ಸುಟ್ಟು ಹಾಕುತ್ತದೆ➤ ಆಧುನಿಕ ಯುದ್ಧತಂತ್ರಗಳು ಸಂಪೂರ್ಣವಾಗಿ ಬದಲಾಗಿವೆ. ಸಮುದ್ರದಲ್ಲಿ ಎದುರಾಳಿಗಳು ನಡೆಸುವ ಅತ್ಯಾಧುನಿಕ ಮತ್ತು ಮಾನವರಹಿತ ಡ್ರೋನ್ (Drone) ಹಾಗೂ ಕ್ಷಿಪಣಿ ದಾಳಿಗಳನ್ನು ಎದುರಿಸಲು ಈ ಎಲೆಕ್ಟ್ರಾನಿಕ್ ಶಸ್ತ್ರಾಸ್ತ್ರಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಶತ್ರುಗಳ ದಾಳಿಗಳಿಗೆ ತಕ್ಷಣವೇ ಪ್ರತಿರೋಧ ಒಡ್ಡಿ, ಅವರ ಕಮಾಂಡ್ ಸಿಸ್ಟಮ್ ಅನ್ನು ನಿಷ್ಕ್ರಿಯಗೊಳಿಸಲು ಈ HPM ಸಿಸ್ಟಮ್ ಭಾರತೀಯ ನೌಕಾಪಡೆಗೆ ಬ್ರಹ್ಮಾಸ್ತ್ರವಾಗಲಿದೆ. ಪ್ರಸ್ತುತ ವಿಶ್ವದ ಕೆಲವೇ ಕೆಲವು ಆಯ್ದ ರಾಷ್ಟ್ರಗಳು ಮಾತ್ರ ಈ ಅತ್ಯಾಧುನಿಕ ಸಾಧನಗಳನ್ನು ಹೊಂದಿವೆ.➤ ಟಾನ್‌ಬೊ ಇಮೇಜಿಂಗ್ ಸಿಇಒ ಹೇಳಿಕೆ: "ಪ್ರಸ್ತುತ ಯುದ್ಧ ಜಗತ್ತಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಮಾನವರಹಿತ ಶಸ್ತ್ರಾಸ್ತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ನೌಕಾಪಡೆಗೆ ಎಚ್‌ಪಿಎಂ ಸಿಸ್ಟಮ್ ಅತ್ಯಂತ ಸೂಕ್ತ ತಂತ್ರಜ್ಞಾನವೆನಿಸಲಿದೆ. ಈ ತಂತ್ರಜ್ಞಾನದ ಸ್ವದೇಶಿ ಅಭಿವೃದ್ಧಿಗಾಗಿ ನಮ್ಮ ಕಂಪನಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದೆ," ಎಂದು ಟಾನ್‌ಬೊ ಇಮೇಜಿಂಗ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಅರವಿಂದ ಲಕ್ಷ್ಮೀಕುಮಾರ್ ತಿಳಿಸಿದ್ದಾರೆ.