* ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವ ಟಿ.ವಿಮಲಾ ವಿ.ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಪ್ರಸಿದ್ಧ ವಿದ್ವಾಂಸ ನಾಡೋಜ ಹಂ.ಪ.ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.* 2024ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಪ್ರೊ. ಹಂ.ಪ ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ. ಬಿ. ಜಗದೀಶ ಶೆಟ್ಟಿ ತಿಳಿಸಿದ್ದಾರೆ.* ಆಯ್ಕೆ ಸಮಿತಿಯಲ್ಲಿ ಡಾ. ತಾಳ್ತಜೆ ವಸಂತ ಕುಮಾರ್, ಡಾ. ಕೆ. ಚಿನ್ನಪ್ಪ ಗೌಡ, ಡಾ. ಪ್ರಭಾಕರ ಜೋಶಿ, ಡಾ. ಕಿಶೋರಿ ನಾಯಕ್, ಮತ್ತು ಡಾ. ಎಸ್. ಪಾಡೀಗಾರ್ ಇದ್ದರು. ಉದ್ಯಮಿ ಟಿ. ಮೋಹನ್ದಾಸ್ ಪೈ ತಮ್ಮ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ ಈ ಪ್ರಶಸ್ತಿ ರೂ. 1 ಲಕ್ಷ ಮೊತ್ತದಾಗಿದೆ.* ಮಾರ್ಚ್ 23ರಂದು ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನ ಸಂಪುಟದ ದ್ವಿತೀಯ ಭಾಗ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಡಾ. ಜಗದೀಶ ಶೆಟ್ಟಿ ತಿಳಿಸಿದ್ದಾರೆ.* ಹಂಪನಾ ಚಿಕ್ಕಬಳ್ಳಾಪುರ ಜಿಲ್ಲೆಯ ಹಂಪಸಂದ್ರ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಂಪಸಂದ್ರ, ಗೌರೀಬಿದನೂರು, ಮಂಡ್ಯ, ಹಾಗೂ ಮಧುಗಿರಿಯಲ್ಲಿ ಪೂರ್ಣಗೊಳಿಸಿ, ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು. ಅವರ ಡಾಕ್ಟರೇಟ್ ಅಧ್ಯಯನ ‘ವಡ್ಡಾರಾಧನೆ: ಸಮಗ್ರ ಅಧ್ಯಯನ’ ಕುರಿತು ಬೆಂಗಳೂರಿನ ವಿವಿಯಲ್ಲಿ ನಡೆಸಿದರು.* ಅಧ್ಯಾಪಕರಾಗಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿ ಮಂಡ್ಯ, ದಾವಣಗೆರೆ, ಶಿವಮೊಗ್ಗ ಹಾಗೂ ಬೆಂಗಳೂರು ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದರು. ಬೆಂಗಳೂರಿನ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ, ಮಂಗಳೂರು ವಿವಿ ಸಿಂಡಿಕೇಟಿನ ಸದಸ್ಯ ಹಾಗೂ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.* ಸಾಹಿತ್ಯ ಕ್ಷೇತ್ರದಲ್ಲಿ ಸವ್ಯಸಾಚಿ ಲೇಖಕರಾದ ಹಂಪನಾ 100ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದು, ಭಾಷಾವಿಜ್ಞಾನ, ಜನಪದ, ಕಾದಂಬರಿ, ಶಿಶುಸಾಹಿತ್ಯ, ಕಾವ್ಯ ಹಾಗೂ ವಿಮರ್ಶೆಯಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ‘ಚಾರುವಸಂತ’ ಮಹಾಕಾವ್ಯ ದೇಶೀಯ ಹಾಗೂ ಜಾನಪದ ನೆಲೆಯಲ್ಲಿ ಹೆಸರಾಗಿದೆ.* ಹಂಪನಾ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ, ಪಂಪ ಪ್ರಶಸ್ತಿ, ನಾಡೋಜ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಜೈನ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.