* ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಬೆಳೆಯುತ್ತಿರುವ ಮಧ್ಯೆ, ಈ ವರ್ಷ ಮೂರನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಜಲಾಂತರ್ಗಾಮಿ ಕ್ಷಿಪಣಿ (SSBN) ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.* ಪಾಕಿಸ್ತಾನ ನೌಕಾಪಡೆಯು ಚೀನಾದ ಸಾಕಷ್ಟು ಬೆಂಬಲದೊಂದಿಗೆ ಬಲಗೊಳ್ಳುತ್ತಿರುವ ಸಮಯದಲ್ಲಿ ಭಾರತೀಯ ಸೇನೆಗೆ ಈ ಕ್ಷಿಪಣಿ ಸೇರ್ಪಡೆ ಹೆಚ್ಚಿನ ಬಲ ತಂದುಕೊಡಲಿದೆ.* ಭಾರತೀಯ ನೌಕಾಪಡೆಯಲ್ಲಿ ಪ್ರಸ್ತುತ INSಅರಿಹಂತ್ ಮತ್ತು INS ಅರಿಘಾಟ್ ಎಂಬ ಎರಡು ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಈ ವರ್ಷದ ಅಂತ್ಯದ ವೇಳೆಗೆ ಮೂರನೆಯ INS ಅರಿಧಮ್ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.* ಅರಿಧಮ್ ಸತತ ಮೂರು ವರ್ಷಗಳಿಂದ ಪ್ರಯೋಗಕ್ಕೆ ಒಳಗಾಗುತ್ತಿದ್ದು, ಶೀಘ್ರದಲ್ಲೇ ಪ್ರಯೋಗ ಪೂರ್ಣಗೊಳ್ಳಲಿದೆ. ಬಳಿಕ ಸೇನೆಗೆ ಸೇರ್ಪಡೆಯಾಗಲಿದೆ. ವೇಗವಾಗಿ ವಿಸ್ತರಿಸುತ್ತಿರುವ ಚೀನಾದ ಜಲಾಂತರ್ಗಾಮಿ ಪಡೆಯನ್ನು ಸದೆಬಡಿಯಲು ಭಾರತೀಯ ನೌಕಾಪಡೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.* ಚೀನಾದ ಪಿಎಲ್ಎ ನೌಕಾಪಡೆ ತನ್ನ ಜಲಾಂತರ್ಗಾಮಿ ಪಡೆಯನ್ನು ಆಧುನೀಕರಿಸಲು ಆದ್ಯತೆ ನೀಡಿದ್ದು, ಪ್ರಸ್ತುತ 6 ಎಸ್ಎಸ್ಬಿಎನ್, 6 ಎಸ್ಎಸ್ಎನ್ ಮತ್ತು 48 ಡೀಸೆಲ್/ವಾಯು-ಸ್ವತಂತ್ರ ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಗಳನ್ನು ನಿರ್ವಹಿಸುತ್ತಿದೆ.