* ರಾಜ್ಯದಲ್ಲಿ ಮಹಿಳೆಯರ ಯೋಗಕ್ಷೇಮ ಮತ್ತು ಗೌರವವನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ಮಹತ್ವದ ಕಾನೂನು ಕ್ರಮಕ್ಕೆ ಮುಂದಾಗಿದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡುವುದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿದರೆ ಅಥವಾ ಮುಟ್ಟಿನ ವಿಚಾರದಲ್ಲಿ ತಾರತಮ್ಯ, ಅವಮಾನ ಅಥವಾ ಅಸ್ಪೃಶ್ಯತೆಯ ವರ್ತನೆ ನಡೆಸಿದರೆ ₹5,000 ವರೆಗೆ ದಂಡ ವಿಧಿಸುವ ಅಧಿಕಾರವನ್ನು ಒಳಗೊಂಡಂತೆ ‘ಕರ್ನಾಟಕ ಮಹಿಳಾ ಯೋಗಕ್ಷೇಮ ರಜೆ ಕಾಯ್ದೆ–2025’ ರ ಕರಡು ಮಸೂದೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ. ಈ ಮಸೂದೆಯನ್ನು ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ.* ಈ ಕಾಯ್ದೆಯಡಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹಾಗೂ ವಿವಿಧ ಸೇವಾ ವಲಯಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು, ಹುಡುಗಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಮುಟ್ಟಿನ ರಜೆ ಸೌಲಭ್ಯ ದೊರೆಯಲಿದೆ. ಸರ್ಕಾರ ಈಗಾಗಲೇ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ಮುಟ್ಟಿನ ರಜೆ ನೀಡುವಂತೆ ಆದೇಶ ಹೊರಡಿಸಿದೆ.* ಮಸೂದೆಯ ಪ್ರಕಾರ, ಮುಟ್ಟಿನ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ಪಡೆಯಬಹುದು. ಸಾಮಾನ್ಯ ರಜಾದಿನಕ್ಕೆ ಮುಟ್ಟು ಬಂದರೆ ಮುಂದಿನ ಕೆಲಸದ ದಿನ ರಜೆ ಪಡೆಯಲು ಅವಕಾಶ ಇದೆ. ಆದರೆ ಇತರ ರಜಾದಿನಗಳಲ್ಲಿ ಮುಟ್ಟಾದಲ್ಲಿ ಹೆಚ್ಚುವರಿ ಮುಟ್ಟಿನ ರಜೆ ಸಿಗುವುದಿಲ್ಲ. ರಜೆ ಬಳಸಲು ಇಚ್ಛಿಸದಿದ್ದರೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ವರ್ಷದಲ್ಲಿ ಗರಿಷ್ಠ 12 ದಿನಗಳವರೆಗೆ ಮಾತ್ರ ಮುಟ್ಟಿನ ರಜೆ ದೊರೆಯುತ್ತದೆ.* ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆ ಹಾಗೂ ಮುಟ್ಟಿನ ಸಮಸ್ಯೆಗಳಿಗೆ ಹಾಜರಾತಿಯಲ್ಲಿ ಶೇ.2 ರಷ್ಟು ವಿನಾಯಿತಿ ನೀಡುವ ಪ್ರಸ್ತಾವವೂ ಮಸೂದೆಯಲ್ಲಿ ಸೇರಿದೆ. ಜೊತೆಗೆ ಸಂಸ್ಥೆಗಳಲ್ಲಿ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ಜೈವಿಕವಾಗಿ ಕೊಳೆಯುವ ಸ್ಯಾನಿಟರಿ ಪ್ಯಾಡ್ಗಳು, ಮುಟ್ಟಿನ ಕಪ್ಗಳು ಹಾಗೂ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒದಗಿಸುವ ಕಡ್ಡಾಯವಿದೆ.* ಇದೇ ವೇಳೆ, ಮಹಿಳಾ ನೌಕರರಿಗೆ ಮುಟ್ಟಿನ ರಜೆ ಸೌಲಭ್ಯ ನೀಡುವ ಕುರಿತು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಅಪರೂಪದ ಬೆಳವಣಿಗೆಗೆ ಸಾಕ್ಷಿಯಾಯಿತು. ಮೊದಲು ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕೆಲವೇ ಗಂಟೆಗಳ ಬಳಿಕ ಏಕಸದಸ್ಯ ನ್ಯಾಯಪೀಠ ತೆರವುಗೊಳಿಸಿದ್ದು, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಇದರಿಂದ ಮುಟ್ಟಿನ ರಜೆ ಕುರಿತ ಕಾನೂನು ಪ್ರಕ್ರಿಯೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ