* ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಎನ್.ಬೀರೇನ್ ಸಿಂಗ್ ರಾಜೀನಾಮೆಯ ಮೂರು ದಿನಗಳ ನಂತರವೂ ಅವರ ಉತ್ತರಾಧಿಕಾರಿಯ ಬಗ್ಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಗುರುವಾರದಿಂದ(ಫೆ.13) ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಗಿದೆ.* ಸಂವಿಧಾನದ ವಿಧಿ 174(1)ರ ಪ್ರಕಾರ ರಾಜ್ಯ ವಿಧಾನಸಭೆಯ ಕೊನೆಯ ಅಧಿವೇಶನದ ಆರು ತಿಂಗಳೊಳಗೆ ಹೊಸ ಅಧಿವೇಶನವನ್ನು ಆಹ್ವಾನಿಸುವುದು ಅನಿವಾರ್ಯವಾಗಿದೆ.* ಮಣಿಪುರದಲ್ಲಿ ಹಿಂದಿನ ವಿಧಾನಸಭಾ ಅಧಿವೇಶನ ಆ.12, 2024ರಂದು ಮುಕ್ತಾಯಗೊಂಡಿತ್ತು ಮತ್ತು ಬುಧವಾರದೊಳಗೆ ಮುಂದಿನ ಅಧಿವೇಶನ ಆರಂಭವಾಗಬೇಕಾಗಿತ್ತು.* ಆದರೆ ಸಿಂಗ್ ರವಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ರಾಜ್ಯಪಾಲ ಅಜಯ ಭಲ್ಲಾ ಅವರು ಸೋಮವಾರ ಆರಂಭಗೊಳ್ಳಬೇಕಿದ್ದ ಬಜೆಟ್ ಅಧಿವೇಶನವನ್ನು ರದ್ದುಗೊಳಿಸಿದ್ದರು.* ಸೋಮವಾರದಿಂದ ಆರಂಭಗೊಳ್ಳಲಿದ್ದ ಅಧಿವೇಶನದಲ್ಲಿ ಸಿಂಗ್ ಸರಕಾರವು ಅವಿಶ್ವಾಸ ನಿರ್ಣಯ ಮತ್ತು ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಎದುರಿಸಬೇಕಿತ್ತು. ಆದರೆ ಅದಕ್ಕೆ ಒಂದು ದಿನ ಮೊದಲೇ ಸಿಂಗ್ ರಾಜೀನಾಮೆ ನೀಡಿದ್ದು ರಾಜಕೀಯ ಹಣಾಹಣಿಯನ್ನು ಪರಿಣಾಮಕಾರಿಯಾಗಿ ತಡೆದಿತ್ತು.* ಮೇ 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ 21 ತಿಂಗಳುಗಳ ಬಳಿಕ ಮತ್ತು ತನ್ನ ವಜಾಕ್ಕೆ ಆಗ್ರಹಿಸಿ ಪ್ರತಿಪಕ್ಷಗಳ ಹೆಚ್ಚುತ್ತಿರುವ ಒತ್ತಡದ ನಡುವೆ ಸಿಂಗ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದಾರೆ.* ವಿಧಾನಸಭೆಯಲ್ಲಿ ತಾನು ಮಂಡಿಸಲಿದ್ದ ಅವಿಶ್ವಾಸ ನಿರ್ಣಯಕ್ಕೆ ಮೊದಲೇ ಸಿಂಗ್ ರಾಜೀನಾಮೆಯ ಉದ್ದೇಶ ಬಿಜೆಪಿಯನ್ನು ರಕ್ಷಿಸುವುದು ಆಗಿತ್ತೇ ಹೊರತು ಮಣಿಪುರದ ಜನತೆಯನ್ನಲ್ಲ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿತ್ತು.* ಸಿಂಗ್ ಬಹಳ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದರೆ,ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ ಗೊಗೊಯಿ ಅವರು,ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಬಿಜೆಪಿಯ ಬಳಿ ಯಾವುದೇ ಮಾರ್ಗಸೂಚಿಯಿಲ್ಲ ಎಂದು ಆರೋಪಿಸಿದ್ದಾರೆ.* ಸರ್ವೋಚ್ಚ ನ್ಯಾಯಾಲಯವು ಜನಾಂಗೀಯ ಹಿಂಸಾಚಾರದಲ್ಲಿ ಸಿಂಗ್ ಪಾತ್ರವನ್ನು ಆರೋಪಿಸಿರುವ ಆಡಿಯೊ ತುಣುಕುಗಳ ಸತ್ಯಾಸತ್ಯತೆಯ ಕುರಿತು ಮುಚ್ಚಿದ ಲಕೋಟೆಯಲ್ಲಿ ವಿಧಿವಿಜ್ಞಾನ ವರದಿಯನ್ನು ಕೇಳಿದ ದಿನಗಳ ಬಳಿಕ ಮಣಿಪುರ ಮುಖ್ಯಮಂತ್ರಿಗಳು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುಕಿಗಳೊಂದಿಗೆ ಹಿಂಸಾಚಾರದ ಸಂದರ್ಭದಲ್ಲಿ ರಾಜ್ಯ ಸರಕಾರದ ಶಸ್ತ್ರಾಗಾರಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲು ಮೈತೈ ಗುಂಪುಗಳಿಗೆ ಅವಕಾಶ ನೀಡಲಾಗಿತ್ತು ಎಂದು ಸಿಂಗ್ ಹೇಳಿದ್ದರೆನ್ನಲಾದ ಸಂಭಾಷಣೆಗಳು ಈ ಆಡಿಯೊ ತುಣುಕುಗಳಲ್ಲಿ ಇವೆ ಎನ್ನಲಾಗಿದೆ.* ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡ,ಸರ್ವೋಚ್ಚ ನ್ಯಾಯಾಲಯದ ತನಿಖೆ ಮತ್ತು ಕಾಂಗ್ರೆಸ್ ನ ಅವಿಶ್ವಾಸ ನಿರ್ಣಯ ಇವುಗಳಿಂದಾಗಿ ಸಿಂಗ್ ರಾಜೀನಾಮೆ ಅನಿವಾರ್ಯವಾಗಿತ್ತು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.