➤ ಬ್ರಿಡ್ಜ್‌ಟೌನ್: ಕೆರಿಬಿಯನ್ ದ್ವೀಪ ರಾಷ್ಟ್ರವಾದ ಬಾರ್ಬಡೋಸ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಮಿಯಾ ಮೊಟ್ಲಿ (Mia Mottley) ನೇತೃತ್ವದ ಬಾರ್ಬಡೋಸ್ ಲೇಬರ್ ಪಾರ್ಟಿ (BLP) ಭರ್ಜರಿ ಜಯ ದಾಖಲಿಸಿದೆ. ಸತತ ಮೂರನೇ ಬಾರಿಗೆ ಸಂಸತ್ತಿನ( 30/30 ) ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಮಿಯಾ ಮೊಟ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಮಿಯಾ ಮೊಟ್ಲಿ ಅವರು ಬಾರ್ಬಡೋಸ್ ಇತಿಹಾಸದಲ್ಲಿ ಸತತವಾಗಿ ಎರಡು ಅವಧಿಗಿಂತ ಹೆಚ್ಚು ಕಾಲ ಅಧಿಕಾರ ನಡೆಸುತ್ತಿರುವ ಎರಡನೇ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.➤ ರಾಲ್ಫ್ ಥಾರ್ನ್ ನೇತೃತ್ವದ ಡೆಮಾಕ್ರಟಿಕ್ ಲೇಬರ್ ಪಾರ್ಟಿ (DLP) ಒಂದೂ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಪ್ರತಿಪಕ್ಷ ನಾಯಕ ರಾಲ್ಫ್ ಥಾರ್ನ್ ಅವರೇ ಸೋಲನ್ನಪ್ಪಿದ್ದಾರೆ.➤ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಿಯಾ ಮೊಟ್ಲಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು 'X' ನಲ್ಲಿ ಪೋಸ್ಟ್ ಮಾಡಿರುವ ಅವರು, "ಮಿಯಾ ಮೊಟ್ಲಿ ಅವರ ಐತಿಹಾಸಿಕ ವಿಜಯಕ್ಕೆ ಹಾರ್ದಿಕ ಅಭಿನಂದನೆಗಳು. ಭಾರತವು ಬಾರ್ಬಡೋಸ್ ಜೊತೆಗಿನ ಸುದೀರ್ಘ ಸ್ನೇಹವನ್ನು ಗೌರವಿಸುತ್ತದೆ. 2024ರ ಭಾರತ-ಕ್ಯಾರಿಕಾಮ್ (India-CARICOM) ಶೃಂಗಸಭೆಯ ಭೇಟಿಯನ್ನು ನೆನಪಿಸಿಕೊಳ್ಳುತ್ತಾ, ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುತ್ತೇವೆ" ಎಂದು ತಿಳಿಸಿದ್ದಾರೆ.➤ ಭಾರತ ಮತ್ತು ಬಾರ್ಬಡೋಸ್ ಕಾಮನ್‌ವೆಲ್ತ್ ಸದಸ್ಯತ್ವ, ಇಂಗ್ಲಿಷ್ ಭಾಷೆ ಮತ್ತು ಕ್ರಿಕೆಟ್‌ನಂತಹ ಸಾಂಸ್ಕೃತಿಕ ನಂಟುಗಳನ್ನು ಹೊಂದಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬಾರ್ಬಡೋಸ್ ಬೆಂಬಲ ನೀಡುವ ಮೂಲಕ ಬಲವಾದ ರಾಜತಾಂತ್ರಿಕ ಸಂಬಂಧವನ್ನು ಹೊಂದಿವೆ.➤ ಮಿಯಾ ಮೊಟ್ಲಿ ಅವರು ಕೇವಲ ಬಾರ್ಬಡೋಸ್ ನಾಯಕಿಯಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ (Climate Action) ಮತ್ತು ಸಾಲ ಸುಧಾರಣೆ (Debt Reform) ಕುರಿತು ಪ್ರಬಲ ಧ್ವನಿಯಾಗಿದ್ದಾರೆ. ಅವರ ಪ್ರಮುಖ ಭರವಸೆಗಳು:- ಬಡತನ ನಿರ್ಮೂಲನೆ: ದೇಶದಲ್ಲಿ ಬಡತನದ ಪ್ರಮಾಣವನ್ನು ತಗ್ಗಿಸುವುದು.- ಮೂಲಸೌಕರ್ಯ ಅಭಿವೃದ್ಧಿ: ರಸ್ತೆ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವುದು.- ಆರೋಗ್ಯ ಕ್ಷೇತ್ರ: ಗುಣಮಟ್ಟದ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವುದು.- ಆರ್ಥಿಕ ಸುಧಾರಣೆ: 2018ರಲ್ಲಿ ಆರ್ಥಿಕ ಹಿಂಜರಿತ ಅನುಭವಿಸಿದ್ದ ದೇಶದ ಸಾಲದ ಅನುಪಾತವನ್ನು (Debt-to-GDP ratio) ಯಶಸ್ವಿಯಾಗಿ 100% ಕ್ಕಿಂತ ಕೆಳಕ್ಕೆ ತಂದಿದ್ದಾರೆ.