➤ ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಶನಿವಾರ (31-01-2026) ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕಿ ಮತ್ತು ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.ಬಾರಾಮತಿಯಲ್ಲಿ ನಡೆದ ದುರದೃಷ್ಟಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರು ನಿಧನರಾದ ನಂತರ ತೆರವಾಗಿದ್ದ ಸ್ಥಾನಕ್ಕೆ ಸುನೇತ್ರಾ ಪವಾರ್ ಅವರನ್ನು ಆಯ್ಕೆ ಮಾಡಲಾಗಿದೆ.➤ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸುನೇತ್ರಾ ಪವಾರ್ ಅವರಿಗೆ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಮುಂಬೈನ ಲೋಕಭವನದಲ್ಲಿ ಪ್ರಮಾಣವಚನ ಬೋಧಿಸಿದರು. ಸುನೇತ್ರಾ ಪವಾರ್ ಅವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಈ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.ಇವರಿಗೆ ಅಬಕಾರಿ (Excise Duty), ಕ್ರೀಡೆ ಮತ್ತು ಯುವಜನ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.➤ ಅಜಿತ್ ಪವಾರ್ ಅವರು ನಿರ್ವಹಿಸುತ್ತಿದ್ದ ಪ್ರಮುಖ ಹಣಕಾಸು ಮತ್ತು ಯೋಜನಾ ಖಾತೆಯನ್ನು ಸದ್ಯಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೇ ಉಳಿಸಿಕೊಂಡಿದ್ದಾರೆ.➤ 62 ವರ್ಷದ ಸುನೇತ್ರಾ ಪವಾರ್ ಅವರು ಈ ಹಿಂದೆ ನೇರ ಚುನಾವಣಾ ರಾಜಕಾರಣದಿಂದ ದೂರವಿದ್ದರೂ, 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು. ನಂತರ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.➤ "ನನ್ನ ಪತಿ ಅಜಿತ್ ಪವಾರ್ ಅವರ ಪರಂಪರೆ ಮತ್ತು ಆದರ್ಶಗಳನ್ನು ನಾನು ಮುಂದುವರಿಸುತ್ತೇನೆ. ಜನರಿಡೆಗಿನ ಅವರ ಬದ್ಧತೆ ಮತ್ತು ಹೋರಾಟದ ಹಾದಿಯೇ ನನಗೆ ಪ್ರೇರಣೆ," ಎಂದು ಸುನೇತ್ರಾ ಪವಾರ್ ಪದಗ್ರಹಣದ ನಂತರ ತಿಳಿಸಿದರು.➤ ಸುನೇತ್ರಾ ಪವಾರ್ ಅವರು ಪ್ರಸ್ತುತ ಯಾವುದೇ ಸದನದ (ವಿಧಾನಸಭೆ ಅಥವಾ ವಿಧಾನ ಪರಿಷತ್) ಸದಸ್ಯರಲ್ಲದ ಕಾರಣ, ಮುಂದಿನ ಆರು ತಿಂಗಳೊಳಗೆ ಅವರು ಚುನಾಯಿತರಾಗಬೇಕಿದೆ.