* ಮೂರು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಸೆಲ್ ನಗರದ ಮಜಾರ್ಗಸ್ನಲ್ಲಿ ಮೊದಲನೇ ಮತ್ತು ಎರಡನೇ ಮಹಾಯುದ್ಧದ ಸ್ಮರಣಾರ್ಥ ನಿರ್ಮಿಸಲಾಗಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಭಾರತೀಯ ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.* ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾರ್ಕನ್ ಅವರೊಂದಿಗೆ ವೀರ ಸೈನಿಕರ ಗೌರವಾರ್ಥ ನಿರ್ಮಿಸಿರುವ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿದರು.* ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಫ್ರಾನ್ಸ್ನ ಮಾರ್ಸೆಲ್ಲೆ ನಗರದ ಜನರ ಅಭೂತಪೂರ್ವ ಬೆಂಬಲವನ್ನು ಸ್ಮರಿಸಿದರು.* ಪ್ರಧಾನಿ ಮೋದಿ ಮಾರ್ಸೆಲ್ ನಗರದ ಜನರು ವೀರ ಸಾವರ್ಕರ್ ಅವರನ್ನು ಬ್ರಿಟಿಷರಿಗೆ ಹಸ್ತಾಂತರಿಸದ ನಿರ್ಧಾರ ಕೈಗೊಂಡುದನ್ನು ಸ್ಮರಿಸಿ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಅಭೂತಪೂರ್ವ ಸಹಕಾರಕ್ಕಾಗಿ ಭಾರತ ಸದಾ ಚಿರಋಣಿಯಾಗಿರುತ್ತದೆ ಎಂದರು.* ಭಾರತ ಮತ್ತು ಫ್ರಾನ್ಸ್ ರಾಜಕೀಯ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿವೆ. ಇತಿಹಾಸದ ಪ್ರಭಾವದಿಂದ ಉಭಯ ದೇಶಗಳು ಪರಸ್ಪರ ಸಹಕರಿಸಿವೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಫ್ರೆಂಚ್ ಸಹಾಯ ಸದಾ ಸ್ಮರಣೀಯ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.* ಅದೇ ರೀತಿ ಮೊದಲನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಭಾರತೀಯ ಸೇನೆಯ ವೀರ ಸೈನಿಕರು, ಫ್ರಾನ್ಸ್ನ ರಣಾಂಗಣದಲ್ಲಿ ಹೋರಾಡಿದ್ದರು.* ಫ್ರಾನ್ಸ್ ಮಣ್ಣಿನಲ್ಲಿ ಭಾರತೀಯ ಸೈನಿಕರ ರಕ್ತ ಬೆರತಿದೆ. ಫ್ರಾನ್ಸ್ ಕೂಡ ಹುತಾತ್ಮ ಭಾರತೀಯ ಸೈನಿಕರ ಗೌರವಾರ್ಥ ಯುದ್ಧ ಸ್ಮಾರಕವನ್ನು ನಿರ್ಮಿಸಿದೆ. ಇದು ಉಭಯ ದೇಶಗಳು ವೀರ ಸೈನಿಕರಿಗೆ ಸಲ್ಲಿಸುವ ಗೌರವದ ಪ್ರತೀಕವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.