* ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12ರಂದು ನಡೆಯಲಿರುವ ಮಾರಿಷಸ್ನ 57ನೇ ರಾಷ್ಟ್ರೀಯ ದಿನ ಆಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.* ಮಾರಿಷಸ್ ಪ್ರಧಾನಿ ನವೀನ್ ರಾಮ್ ಗೂಲಮ್ ಅವರು ಮೋದಿ ಆತಿಥ್ಯದ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ನಿದರ್ಶನ ಎಂದು ಬಣ್ಣಿಸಿದ್ದಾರೆ.* “ನನ್ನ ಆಹ್ವಾನದ ಮೇರೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮ ರಾಷ್ಟ್ರೀಯ ದಿನಾಚರಣೆಯ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ ಎಂದು ಸದನಕ್ಕೆ ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ” ಎಂದು ಹೇಳಿದ್ದಾರೆ.* ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಮೋದಿ ಅವರಂತಹ ವಿಶೇಷ ವ್ಯಕ್ತಿಯನ್ನು ಅತಿಥಿಯಾಗಿ ಆಹ್ವಾನಿಸುವುದು ನಮ್ಮ ಪಾಲಿಗೆ ಗೌರವದ ವಿಷಯ ಎಂದು ಮಾರಿಷಸ್ ಪ್ರಧಾನಿ ಅಲ್ಲಿನ ಸಂಸತ್ತಿನಲ್ಲಿ ಹೇಳಿದ್ದಾರೆ.* ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರಿಷಸ್ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.* 1968 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಸ್ಮರಣಾರ್ಥವಾಗಿ ಮಾರಿಷಸ್ ಪ್ರತಿ ವರ್ಷ ಮಾರ್ಚ್ 12 ರಂದು ತನ್ನ ರಾಷ್ಟ್ರೀಯ ದಿನವನ್ನು ಆಚರಿಸುತ್ತದೆ. ಈ ವರ್ಷದ ಆಚರಣೆಗಳು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಿಂದ ವಿಶೇಷ ಮಹತ್ವವನ್ನು ಪಡೆದುಕೊಳ್ಳಲಿದ್ದು , ಭಾರತ ಮತ್ತು ಮಾರಿಷಸ್ ನಡುವಿನ ದೀರ್ಘಕಾಲದ ಸ್ನೇಹವನ್ನು ಬಲಪಡಿಸಲಿದೆ.