* ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಈ ವರ್ಷ ಕರ್ನಾಟಕದ ‘ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು’ ಎಂಬ ಸ್ತಬ್ಧಚಿತ್ರ ಭಾಗವಹಿಸಲಿದೆ, ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ತಿಳಿಸಿದ್ದಾರೆ.* ಕರ್ನಾಟಕಕ್ಕೆ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಅತ್ಯಂತ ಸ್ಮರಣೀಯವಾದುದು. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ನಮ್ಮ ರಾಜ್ಯದಲ್ಲಿ, ಎಲ್ಲ ಧರ್ಮಗಳ ದೇವಾಲಯಗಳಿವೆ. ಈ ಪೈಕಿ ಐತಿಹಾಸಿಕ ಪಟ್ಟಣವಾದ ಗದಗದ ಲಕ್ಕುಂಡಿಯು ಒಂದಾಗಿದೆ. ಅಹಿಂಸಾವಾದಿಯ ನೆಲೆಬೀಡು. ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ ಎಂದು ಅವರು ತಿಳಿಸಿದರು.* ಪಥಸಂಚಲನದಲ್ಲಿ ಭಾಗವಹಿಸುವ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಲಕ್ಕುಂಡಿ : ಶಿಲ್ಪಕಲೆಯ ತೊಟ್ಟಿಲು, ಮೆಕ್ಕೆಕಟ್ಟು : ಮರಕೆತ್ತನೆಯ ದೈವ ನಿಧಿ, ಕರ್ನಾಟಕದ ಸಮೃದ್ದಿಯ ಆಚರಣೆಗಳು ಮತ್ತು ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು.* ಆಯ್ದ ನಾಲ್ಕು ಸ್ತಬ್ಧಚಿತ್ರ ವಿಷಯಗಳಲ್ಲಿಯೇ, "ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು" ಎಂಬ ವಿಷಯವನ್ನು ಸಂಪೂರ್ಣ ಸಮಿತಿ ಒಮ್ಮತದಿಂದ ಆಯ್ಕೆಮಾಡಿತು. ಈ ಚಿತ್ರವು ಲಕ್ಕುಂಡಿಯ ದೇವಾಲಯಗಳನ್ನು ಪ್ರದರ್ಶಿಸಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.* ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ಅನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಹೊಂದಿದೆ.* ಸ್ತಬ್ಧಚಿತ್ರದ ಜತೆಗೆ ಮೈಸೂರು, ಬೆಂಗಳೂರು, ಗದಗ ಮತ್ತು ಧಾರವಾಡದ 18 ಮಂದಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸ್ತಬ್ಧಚಿತ್ರದ ಇಕ್ಕೆಲಗಳಲ್ಲಿ ತಲಾ ನಾಲ್ವರು ಮಹಿಳೆಯರು ಮತ್ತು ಪುರುಷರು ಜಗ್ಗಲಿಗೆ ಬಾರಿಸುತ್ತಾ ಮುನ್ನಡೆಯಲಿದ್ದಾರೆ. ಇನ್ನುಳಿದ 10 ಮಂದಿ ಸ್ತಬ್ಧಚಿತ್ರದ ಮೇಲುಭಾಗದಲ್ಲಿ ಪ್ರವಾಸಿಗರಾಗಿ ಕಾಣಿಸಿಕೊಳ್ಳಲಿದ್ದಾರೆ.* ಗದಗದ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ| ಶರಣು ಗೋಗೇರಿ ಮಾರ್ಗದರ್ಶನ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾ ನಿರ್ದೇಶಕ ಶಶಿಧರ ಅಡಪ ವಿನ್ಯಾಸ, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರ ಸಂಗೀತ ನೀಡಿದ್ದಾರೆ.