* ವಿಶ್ವ ಆರ್ಥಿಕ ವೇದಿಕೆಯು 2025ನೇ ಸಾಲಿನ ಜಾಗತಿಕ ಲಿಂಗ ಅಂತರ ವರದಿಯನ್ನು ಬಿಡುಗಡೆ ಮಾಡಿದ್ದು, 148 ದೇಶಗಳ ಪಟ್ಟಿಯಲ್ಲಿ ಭಾರತ 131ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಪ್ರಕಟವಾದ ವರದಿಯಲ್ಲಿ 129ನೇ ಸ್ಥಾನದಲ್ಲಿದ್ದ ಭಾರತ, ಪ್ರಸಕ್ತ ಸಾಲಿನಲ್ಲಿ ಕೇವಲ ಶೇ.64.1ರ ಸಮಾನತೆಯ ಅಂಕ ಪಡೆದ ಕಾರಣ 2 ಸ್ಥಾನ ಕುಸಿತ ಕಂಡಿದೆ.* ವರದಿಯ ಪ್ರಕಾರ ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸಮಾನತೆಯ ಪ್ರಮಾಣ ಸುಧಾರಿಸಿದ್ದರೂ, ಮಹಿಳೆಯರ ರಾಜಕೀಯ ಪ್ರಾಧಾನ್ಯತೆ ದೇಶದಲ್ಲಿ ಕುಸಿದಿದೆ ಎಂದು ತಿಳಿದುಬಂದಿದೆ. ಐಸ್ಲ್ಯಾಂಡ್ ರಾಷ್ಟ್ರವು ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಸತತ 16ನೇ ವರ್ಷವೂ ಕಾಯ್ದುಕೊಂಡಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಬಾಂಗ್ಲಾದೇಶ(24) ಸಾಧನೆ ಅತ್ಯುತ್ತಮವಾಗಿದ್ದರೆ, ಪಾಕಿಸ್ಥಾನ (148) ಕೊನೆಯ ಸ್ಥಾನ ಪಡೆದಿದೆ.* ವಿವಿಧ ಕ್ಷೇತ್ರಗಳಲ್ಲಿ ಪುರುಷರ ಜತೆಗೆ ಮಹಿಳೆಯರ ಭಾಗವಹಿಸುವಿಕೆಯ ಆಧಾರದ ಮೇಲೆ ಜಾಗತಿಕ ಲಿಂಗ ಅಂತರ ಸೂಚ್ಯಂಕವನ್ನು ತಯಾರಿಸಲಾಗುತ್ತದೆ. ಆರ್ಥಿಕತೆ ಯಲ್ಲಿ ಭಾಗಿ (ಉದ್ಯೋಗ), ಶಿಕ್ಷಣ, ಆರೋಗ್ಯ ಹಾಗೂ ರಾಜಕೀಯ ಸಶಕ್ತೀಕರಣ ಕ್ಷೇತ್ರಗಳಲ್ಲಿ ಪುರುಷರ ಹಾಗೂ ಮಹಿಳೆಯರಿಗೆ ಲಭ್ಯವಿರುವ ಅವಕಾಶಗಳ ವ್ಯತ್ಯಾಸವನ್ನು ಆಧಾರಿಸಿ ಈ ಪಟ್ಟಿ ತಯಾರಿಸಲಾಗುತ್ತದೆ.* ಜಾಗತಿಕ ಲಿಂಗ ಅಂತರ ವರದಿಯ ಟಾಪ್ 5 ದೇಶಗಳು: ಐಸ್ಲ್ಯಾಂಡ್ 1 ನೇ ಸ್ಥಾನ ಫಿನ್ಲ್ಯಾಂಡ್ 2 ನೇ ಸ್ಥಾನ ನಾರ್ವೆ 3 ನೇ ಸ್ಥಾನ ಯುಕೆ 4 ನೇ ಸ್ಥಾನ ನ್ಯೂಜಿಲೆಂಡ್ 5 ನೇ ಸ್ಥಾನ * ದಕ್ಷಿಣ ಏಷ್ಯಾ ಪ್ರದೇಶದ ಶ್ರೇಯಾಂಕ :ಬಾಂಗ್ಲಾದೇಶ 24 ನೇ ಸ್ಥಾನ ಭೂತಾನ್ 119 ನೇ ಸ್ಥಾನ ಶ್ರೀಲಂಕಾ 130 ನೇ ಸ್ಥಾನ ನೇಪಾಳ 125 ನೇ ಸ್ಥಾನ ಮಾಲ್ಡೀವ್ಸ್ 138 ನೇ ಸ್ಥಾನ ಪಾಕಿಸ್ತಾನ 148 ನೇ ಸ್ಥಾನ