* ಕರ್ನಾಟಕದ ಕೃಷ್ಣಾ ನದಿ ಮತ್ತು ಕಾವೇರಿ ನದಿ ಸೇರಿದಂತೆ 12 ನದಿಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿ ನೀರಿನ ಗುಣಮಟ್ಟ ಕಳಪೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.* ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಪ್ರಧಾನ ಪೀಠದ ಮುಖ್ಯಸ್ಥ ಪ್ರಕಾಶ್ ಶ್ರೀವಾಸ್ತವ ಅವರು ಹಾಗೂ ಡಾ.ಎ.ಸೆಂಥಿಲ್ ವೇಲ್ ಅವರನ್ನು ಒಳಗೊಂಡ ಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಈ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ಎನ್‌ಜಿಟಿ ನೋಟಿಸ್ ನೀಡಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.* ತುಂಗಭದ್ರಾ, ಕಾವೇರಿ, ಅರ್ಕಾವತಿ, ಕಬಿನಿ, ಲಕ್ಷ್ಮಣತೀರ್ಥ, ಭದ್ರಾ, ಕಾಗಿನ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾವತಿ ಹಾಗೂ ತುಂಗಾ ನದಿಗಳ ನೀರಿನ ಗುಣಮಟ್ಟದ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿದೆ.* ಈ ವರದಿಯ ಪ್ರಕಾರ ಈ ನದಿಗಳ ನೀರಿನ ಗುಣಮಟ್ಟ ಡಿ ದರ್ಜೆಯದ್ದು. ಕೇಂದ್ರ ಸರ್ಕಾರ ನೀರಿನ ಮೇಲ್ವಿಚಾರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ 38 ಕಡೆಗಳಲ್ಲಿ ನದಿ ನೀರಿನ ಗುಣಮಟ್ಟದ ಪರಿಶೀಲನೆ ನಡೆಸಲಾಗುತ್ತದೆ. 19 ಕಡೆಗಳಲ್ಲಿ ನೀರಿನ ಗುಣಮಟ್ಟ ಕಳಪೆಯಾಗಿರುವುದು ಗೊತ್ತಾಗಿದೆ. * ಜನಸಂಖ್ಯೆಯ ವ್ಯಾಪಕ ಬೆಳವಣಿಗೆ, ನಗರೀಕರಣದಿಂದ ಉಂಟಾದ ಭಾರಿ ಒತ್ತಡ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. * ಇದು ವನ್ಯಜೀವಿಗಳ ಬಳಕೆ ಹಾಗೂ ಮೀನು ಸಾಕಣೆಗೆ ಮಾತ್ರ ಸೂಕ್ತವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ನದಿಗಳ ಪಕ್ಕದಲ್ಲಿ ಕೈಗಾರಿಕೆಗಳು ತಲೆ ಎತ್ತಿದ್ದು, ತ್ಯಾಜ್ಯ ನೀರನ್ನು ಸಂಸ್ಕರಿಸದೆ ನದಿಗಳಿಗೆ ಬಿಡಲಾಗುತ್ತಿದೆ. * ಈ ಪ್ರಕರಣವನ್ನು ಚೆನ್ನೈ ಪೀಠಕ್ಕೆ ವರ್ಗಾಯಿಸಲಾಗಿದೆ. ಹಾಗೂ ನದಿಗಳಲ್ಲಿ ಹೆಚ್ಚಿದ ಮಾಲಿನ್ಯದ ವಿಚಾರಣೆಯನ್ನು ಏಪ್ರಿಲ್ 08 ಕ್ಕೆ ಮುಂದೂಡಲಾಗಿದೆ.