* ಕರ್ನಾಟಕ ರಾಜ್ಯದ ತಲಾ ಆದಾಯ ಕಳೆದ ಒಂದು ವರ್ಷದಲ್ಲಿ 36 ಸಾವಿರ ರೂ. ಹೆಚ್ಚಳವಾಗಿದೆ ಎಂದು 2022- 23ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ರಾಜ್ಯ ನಿವ್ವಳ ಆಂತರಿಕ ಉತ್ಪನ್ನ ಹಾಗೂ ತಲಾ ಆದಾಯ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. * ರಾಜ್ಯದ ವಾರ್ಷಿಕ ತಲಾ ಆದಾಯದಂತೆ ಜಿಲ್ಲಾವಾರು ತಲಾ ಆದಾಯವೂ ಹೆಚ್ಚಳವಾಗಿದ್ದು, ಬೆಂಗಳೂರು ನಗರ 6,21,131 ರೂ. ತಲಾ ಆದಾಯದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ 1,24,998 ರೂ. ತಲಾ ಆದಾಯದೊಂದಿಗೆ ಜಿಲ್ಲೆಗಳಲ್ಲೇ ಕೊನೆಯ ಸ್ಥಾನದಲ್ಲಿದೆ.* 3,70,834 ರೂ.ಗಳೊಂದಿಗೆ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದರೆ, 3,38,978 ರೂ. ತಲಾ ಆದಾಯದೊಂದಿಗೆ ಕರಾವಳಿ ಜಿಲ್ಲೆ ಉಡುಪಿ ಮೂರನೇ ಸ್ಥಾನದಲ್ಲಿದೆ. * ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ. ಕೊನೆಯ ಐದನೇ ಸ್ಥಾನದಲ್ಲಿ ಕ್ರಮವಾಗಿ ಯಾದಗಿರಿ, ಕೊಪ್ಪಳ, ಬೆಳಗಾವಿ, ಬೀದರ್‌, ಕಲಬುರಗಿ ಜಿಲ್ಲೆಗಳಿವೆ.* ದೇಶದ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿರುವ ರಾಜ್ಯಗಳಿಗೆ ಹೋಲಿಸಿದರೆ ಪೂರ್ವ ಹಾಗೂ ಉತ್ತರ ಭಾಗದಲ್ಲಿರುವ ರಾಜ್ಯಗಳ ತಲಾ ಆದಾಯದಲ್ಲಿ ಏರಿಕೆಯಾಗಿಲ್ಲ. ಇದರಿಂದ ರಾಜ್ಯಗಳ ನಡುವೆ ಅಸಮಾನತೆಯ ಬಿರುಕು ದೊಡ್ಡದಾಗುತ್ತಿದೆ ಎಂದು ಹೇಳಿದೆ.* 2011-12ರಲ್ಲಿ ಗುಜರಾತ್‌ನ ತಲಾ ಆದಾಯವು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ 1.4 ಪಟ್ಟು ಹೆಚ್ಚು ಇತ್ತು. 2022-23ರಲ್ಲಿ 1.8 ಪಟ್ಟಿನಷ್ಟಿದ್ದು, ಕರ್ನಾಟಕದ ತಲಾ ಆದಾಯವು 1.7 ಪಟ್ಟು ಹಾಗೂ ತೆಲಂಗಾಣದ ತಲಾ ಆದಾಯವು 1.6 ಪಟ್ಟಿನಷ್ಟು ಇದೆ. ಆದರೆ ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರದ ತಲಾ ಆದಾಯವು ಇಳಿಕೆಯಾಗಿದ್ದು, ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ ಎಂದು ತಿಳಿಸಿದೆ.