* ರಂಗಭೂಮಿ ನಟ ಯಶವಂತ ಸರದೇಶಪಾಂಡೆ (60) ಅವರು ಸೋಮವಾರ(ಸೆಪ್ಟೆಂಬರ್ 29) ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. * ಭಾನುವಾರ ಧಾರವಾಡದಲ್ಲಿ ನಾಟಕ ಪ್ರದರ್ಶನ ನೀಡಿದ ನಂತರ ಅವರು ಬೆಂಗಳೂರಿಗೆ ಮರಳಿದ್ದರು. ಬೆಳಿಗ್ಗೆ 10 ಗಂಟೆಗೆ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾದರೂ ಅವರನ್ನು ಉಳಿಸಲಾಗಲಿಲ್ಲ.* ವಿಜಯಪುರ ಜಿಲ್ಲೆಯ ಉಕ್ಕಲಿಯವರಾದ ಯಶವಂತ ಅವರು ಹೆಗ್ಗೋಡಿನ ನಿನಾಸಂನಿಂದ ನಾಟಕದಲ್ಲಿ ಪದವಿ ಪಡೆದಿದ್ದರು. ಬಳಿಕ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ ಹಾಗೂ ಚಲನಚಿತ್ರ ಸಂಭಾಷಣೆಗಳಲ್ಲಿ ತರಬೇತಿ ಪಡೆದಿದ್ದರು.* ಅವರು ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದು, ಆಲ್ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್ ಹಾಸ್ಯನಾಟಕಗಳಿಂದ ಜನಪ್ರಿಯತೆ ಗಳಿಸಿದ್ದರು. ಬೇಂದ್ರೆಯ ನಾಟಕಗಳನ್ನು ರಂಗಕ್ಕೆ ತಂದ ಗೌರವವೂ ಇವರದೇ.* ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ನಟನೆಯನ್ನು ಹೊರತುಪಡಿಸಿ, ಸಂಭಾಷಣೆ ಬರಹಗಾರರಾಗಿ ಕೂಡ ತಮ್ಮ ಕೌಶಲ್ಯ ಮೆರೆದಿದ್ದರು. ಅಮೃತಧಾರೆ, ಮರ್ಮ, ಅತಿಥಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.* ದಾವಣಗೆರೆಯ ರಂಗಾಯಣದ ಮಾಜಿ ನಿರ್ದೇಶಕರಾಗಿದ್ದ ಅವರು, ಅಕ್ಟೋಬರ್ನಲ್ಲಿ ಕೊಳಲು ವಾದಕ ಪಂಡಿತ ಪ್ರವೀಣ ಗೋಡಖಿಂಡಿ ಅವರೊಂದಿಗೆ ‘ಕೊಳಲು’ ನಾಟಕದಲ್ಲಿ ಅಭಿನಯಿಸಬೇಕಾಗಿತ್ತು.