* ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ಜನಪ್ರಿಯ ಹಾಸ್ಯನಟ ಎಂ. ಎಸ್. ಉಮೇಶ್ ಅವರು 80 ವರ್ಷದ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು. ಕಳೆದ ಕೆಲವು ವಾರಗಳಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪರಿಣಾಮವಾಗಿ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಅವರಿಗೆ ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಹಚ್ಚಿದ್ದರು. ಕಿಮೊಥೆರಪಿ ಮತ್ತು ಇಮ್ಯೂನೋಥೆರಪಿ ಮೂಲಕ ಚಿಕಿತ್ಸೆ ನೀಡಿದರೂ ಫಲಕಾರಿ ಆಗದೆ ಅವರು ಕೊನೆಯುಸಿರೆಳೆದರು.* ಮೈಸೂರು ಮೂಲದ ಉಮೇಶ್ ಅವರು 1960ರ ದಶಕದಲ್ಲಿ ಸಿನಿಮಾರಂಗಕ್ಕೆ ಪ್ರವೇಶಿಸಿ, 60 ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ನಟನೆಯಲ್ಲಿ ಸಕ್ರಿಯರಾಗಿದ್ದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಅವರು, ಹಾಸ್ಯ ಪಾತ್ರಗಳು ಮತ್ತು ಪೋಷಕ ಪಾತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು.* ಮಕ್ಕಳ ರಾಜ್ಯ’ ಸಿನಿಮಾದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಉಮೇಶ್ ಅವರು, ‘ನಾಗರ ಹೊಳೆ’, ‘ಗಜಪತಿ ಗರ್ವಭಂಗ’, ‘ಗುರು ಶಿಷ್ಯರು’, ‘ಕಾಮನಬಿಲ್ಲು’, ‘ಅಪೂರ್ವ ಸಂಗಮ’, ‘ಗೋಲ್‌ಮಾಲ್ ರಾಧಾಕೃಷ್ಣ’, ‘ಶ್ರುತಿ ಸೇರಿದಾಗ’ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಗುರುತು ಮೂಡಿಸಿದ್ದರು.* ಪ್ರಶಸ್ತಿ ಗೌರವಗಳು : ಕಥಾಸಂಗಮದ' ಎಂಬ ಮೂರು ಕಥಾನಕಗಳ ಚಿತ್ರವಾದ ಮುನಿತಾಯಿಯಲ್ಲಿ 'ತಿಮ್ಮರಾಯಿ' ಪಾತ್ರಕ್ಕೆ ಉತ್ತಮ ಪೋಷಕನಟ ಪ್ರಶಸ್ತಿ, 1994ರಲ್ಲಿ ನಾಟಕ ಅಕಾಡಮಿ ಪ್ರಶಸ್ತಿ, 1997ರಲ್ಲಿ ಮಹಾನಗರ ಪಾಲಿಕೆ ಪ್ರಶಸ್ತಿ. ಆತ್ಮಚರಿತ್ರೆ ‘ಬಣ್ಣದ ಘಂಟೆ’ಗೆ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಉಮೇಶರನ್ನು ಅರಸಿಬಂದಿವೆ. ಉಮೇಶರ ಐದು ದಶಕಗಳ ಚಿತ್ರರಂಗದಲ್ಲಿನ ಕಾಯಕವನ್ನು ಚಿತ್ರರಂಗವು ಗೌರವಿಸಿತು.* ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದು, ‘ಕಮಲ್ ಶ್ರೀದೇವಿ’ ಹಾಗೂ ‘ಐ ಆ್ಯಮ್ ಗಾಡ್’ ಅವರ ಇತ್ತೀಚಿನ ಚಿತ್ರಗಳಾಗಿವೆ. ಅವರ ನಿಧನವು ಕನ್ನಡ ಚಲನಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದೆ.