* ಮೊಘಲ್ ದೊರೆ ಔರಂಗಜೇಬನ ಸಮಾಧಿಯಿರುವ ಖುಲ್ತಾಬಾದ್ನ ಹೆಸರನ್ನು 'ರತ್ನಪುರ' ಎಂದು ಬದಲಿಸುವುದಾಗಿ ಮಹಾರಾಷ್ಟ್ರ ಸಚಿವ ಸಂಜಯ್ ಶಿರ್ಸಾಟ್ ಅವರು ಪ್ರಕಟಿಸಿದ್ದಾರೆ.* “ಔರಂಗಜೇಬ್ ಶಾಸನಕಾಲದಲ್ಲಿ ಅನೇಕ ಸ್ಥಳಗಳ ಹೆಸರನ್ನು ಬದಲಾಯಿಸಲಾಗಿದೆ. ಈಗ ನಮ್ಮ ಸರ್ಕಾರ ಆ ಮೂಲ ಹೆಸರನ್ನೇ ಪುನಃಸ್ಥಾಪಿಸಲು ಮುಂದಾಗಿದೆ" ಎಂದು ಛತ್ರಪತಿ ಸಂಭಾಜಿನಗರದ ಉಸ್ತುವಾರಿ ಸಚಿವರಾದ ಶಿರ್ಸಾಟ್ ಹೇಳಿದರು.* ಸಂಭಾಜಿನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಈ ಸಮಾಧಿಯನ್ನು ತೆರವುಗೊಳಿಸುವಂತೆ ಹಲವು ಸಂಘಟನೆಗಳು ಆಗ್ರಹಿಸುತ್ತಿದ್ದು, ಇಲ್ಲಿ ಔರಂಗಜೇಬ್, ಆತನ ಮಗ ಅಜಮ್ ಶಾ ಹಾಗೂ ನಿಜಾಮ್ ಅಸಫ್ ಜಾ ಸೇರಿ ಮೊಘಲ್ ವಂಶದ ಅನೇಕರ ಸಮಾಧಿಗಳಿವೆ.* ಛತ್ರಪತಿ ಸಂಭಾಜಿ ಮಹಾರಾಜರನ್ನು ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದ ಕ್ರೂರ ಚಕ್ರವರ್ತಿ ಔರಂಗಜೇಬನ ಸಮಾಧಿಗೆ ಮಹಾರಾಷ್ಟ್ರದಲ್ಲಿ ಸ್ಥಳವಿಲ್ಲ ಎಂದು ಕಳೆದ ತಿಂಗಳು ಶಿರ್ಸಾಟ್ ಅವರು ಹೇಳಿದ್ದರು..* ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಅವರ ಪುತ್ರ ಸಂಭಾಜಿ ಮಹಾರಾಜರ ಇತಿಹಾಸವನ್ನು ಪ್ರದರ್ಶಿಸುವ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಶಿರ್ಸಾಟ್ ಹೇಳಿದರು.