*ಕೆನಡಾದ ಲಿಬರಲ್ ಪಕ್ಷವು ದೇಶದ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅವರನ್ನು ಬಹುಮತದಿಂದ ಆಯ್ಕೆ ಮಾಡಿದೆ. ಜನವರಿಯಲ್ಲೇ ಕೆನಡಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಜಸ್ಟಿನ್ ಟ್ರೂಡೋ, ಈವರೆಗೂ ಹಂಗಾಮಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದಾರೆ. * ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರ ಮತ್ತು ದೇಶವನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿರುವ ಮತ್ತು ಫೆಡರಲ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನೂತನ ಪ್ರಧಾನಿ ಆಯ್ಕೆ ಮಹತ್ವ ಪಡೆದುಕೊಂಡಿದೆ.* 59 ವರ್ಷದ ಕಾರ್ನಿಯವರು ಆಯ್ಕೆಯಾಗುತ್ತಿದ್ದಂತೆ ಅಮೆರಿಕಾ ಅಧ್ಯಕ್ಷರ ಮೇಲೆ ಹರಿಹಾಯ್ದಿದ್ದು, ಕೆನಡಾದ ಕಾರ್ಮಿಕರು, ಕುಟುಂಬಗಳು ಮತ್ತು ವ್ಯವಹಾರಗಳ ಮೇಲೆ ಅಮೆರಿಕ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.* ಟ್ರಂಪ್ ಕೆನಡಾದ ಆರ್ಥಿಕತೆಯನ್ನು ದಣಿಗೊಳಿಸಲು ಅಸಮಂಜಸ ಸುಂಕ ಹೇರುತ್ತಿದ್ದಾರೆಂದು ಟೀಕಿಸಿ, ಮಾರ್ಕ್ ಅವರು ಹೊಸ ವ್ಯಾಪಾರ ಪಾಲುದಾರರನ್ನು ಹುಡುಕಬೇಕೆಂದು ಹಾಗೂ ಅಮೆರಿಕಗೆ ಸುಂಕಕ್ಕೆ ಪ್ರತಿಸುಂಕ ಹಾಕುವುದಾಗಿ ಹೇಳಿದರು.* ಮಾರ್ಕ್ ಕಾರ್ನಿ ಕೆನಡಾದ ಪ್ರಧಾನಿ ಸ್ಥಾನಕ್ಕೆ ಭಾರೀ ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರು 85.9% ಮತಗಳನ್ನು ಪಡೆದಿದ್ದು, ಕ್ರಿಸ್ಟಿಯಾ ಫ್ರೀಲ್ಯಾಂಡ್ ಕೇವಲ 8% ಮತಗಳನ್ನು ಪಡೆದರು. ಕಾರ್ನಿ ಹಿಂದೆ ಬ್ಯಾಂಕ್ ಆಫ್ ಕೆನಡಾ ಮತ್ತು ಇಂಗ್ಲೆಂಡ್ನ ಮುಖ್ಯಸ್ಥರಾಗಿದ್ದು, ಅವರ ಆರ್ಥಿಕ ಪರಿಣತಿ ಕೆನಡಾ ಆರ್ಥಿಕತೆಗೆ ಅನುಕೂಲಕಾರಿಯಾಗಿದೆ ಎಂದು ಲಿಬರಲ್ ಪಾರ್ಟಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.* ಕೆನಡಾ ಅಕ್ಟೋಬರ್ ವೇಳೆಗೆ ಸಾರ್ವಜನಿಕ ಚುನಾವಣೆಯನ್ನು ಮಾಡಬೇಕಿದೆ. ಆ ವರೆಗೂ ಮಾರ್ಕ್ ಕಾರ್ನಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ.