* ಮೆಕ್ಸಿಕೊ, ಕೆನಡಾ ಹಾಗೂ ಚೀನಾದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.* ಕೆನಡಾ ಮತ್ತು ಮೆಕ್ಸಿಕೊ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತಗಳ ಮೇಲೆ ಶೇ 25ರಷ್ಟು ಮತ್ತು ಚೀನಾದ ವಸ್ತುಗಳ ಮೇಲೆ ಶೇ 10ರಷ್ಟು ಸುಂಕವನ್ನು ಹೆಚ್ಚಿಸಲಾಗಿದೆ. ನಾಳೆಯಿಂದ ಫೆಬ್ರುವರಿ 4 ರಿಂದಈ ಪರಿಷ್ಕೃತ ಸುಂಕವು ಆಯಾ ದೇಶಗಳ ಮೇಲೆ ಜಾರಿಯಾಗಲಿದೆ.* ಅಮೆರಿಕದ ಈ ಕ್ರಮವನ್ನು ಮೂರೂ ದೇಶಗಳು ಖಂಡಿಸಿವೆ. ಇದಕ್ಕೆ ಪ್ರತಿಕಾರವಾಗಿ ಕ್ರಮ ಕೈಗೊಳ್ಳುವುದಾಗಿ ಈ ದೇಶಗಳು ಹೇಳಿವೆ. ಅದರಂತೆ 106.6 ಬಿಲಿಯನ್ ಡಾಲರ್ನಷ್ಟು (ಸುಮಾರು ₹9.24 ಲಕ್ಷ ಕೋಟಿ) ಮೊತ್ತದ ಅಮೆರಿಕದ ವಸ್ತುಗಳ ಮೇಲೆ ಕೆನಡಾವು ಶೇ 25ರಷ್ಟು ಆಮದು ಸುಂಕ ವಿಧಿಸಲು ನಿರ್ಧರಿಸಿದೆ.* ಮೆಕ್ಸಿಕೊ ಕೂಡ ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮದ ಕೈಗೊಳ್ಳುವ ಘೋಷಣೆ ಮಾಡಿದೆ. ವಿಶ್ವ ವ್ಯಾಪಾರ ಸಂಸ್ಥೆಗೆ ದೂರು ನೀಡುವುದಾಗಿ ಚೀನಾ ಹೇಳಿದೆ. ಅಮೆರಿಕಕ್ಕೆ ಅಕ್ರಮ ವಲಸಿಗರು ಬರುವುದು ನಿಲ್ಲುವವರೆಗೂ ಈ ಸುಂಕ ಜಾರಿಯಲ್ಲಿರಲಿದೆ ಎಂದು ಟ್ರಂಪ್ ಹೇಳಿದ್ದಾರೆ. * ಹೊಸ ತೆರಿಗೆ ಹೇರಿಕೆಯಿಂದಾಗಿ ಈ ಮೂರು ದೇಶಗಳ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಅಮೆರಿಕದ ಮೂರನೇ ಒಂದು ಪ್ರಮಾಣದಷ್ಟು ಆಮದು ಈ ರಾಷ್ಟ್ರಗಳಿಂದಲೇ ಬರುತ್ತವೆ. ಕಾರು, ಔಷಧ, ಶೂ, ಎಲೆಕ್ಟ್ರಾನಿಕ್ಸ್, ಸ್ಟೀಲ್ ಹಾಗೂ ಇನ್ನಿತರ ವಸ್ತುಗಳು ಈ ದೇಶಗಳಿಂದ ಅಮೆರಿಕಕ್ಕೆ ಆಮದಾಗುತ್ತವೆ. ಈ ಹೊಸ ತೆರಿಗೆಯಿಂದಾಗಿ ಹಣದುಬ್ಬರದ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.* ಅಮೆರಿಕದ ಆಯ್ದ ಸರಕುಗಳ ಮೇಲೆ ಶೇ.25 ತೆರಿಗೆ ವಿಧಿಸುತ್ತೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಘೋಷಿಸಿದ್ದಾರೆ. ಟ್ರಂಪ್ ಆದೇಶ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೆನಡಾ, ನಮ್ಮ ನಿಯಮ ಕೂಡ ಮಂಗಳವಾರ(ಫೆಬ್ರುವರಿ 04)ದಿಂದಲೇ ಜಾರಿ ಬರಲಿದೆ ಎಂದಿದ್ದಾರೆ. ಇದು ಅಮೆರಿಕ-ಕೆನಡಾ ನಡುವಿನ ದೀರ್ಘ ವ್ಯಾಪಾರ ಸಂಬಂಧವನ್ನು ಹದಗೆಡಿಸಲಿದೆ ಎಂದು ರಾಜತಾಂತ್ರಿಕ ತಜ್ಞರು ಎಚ್ಚರಿಸಿದ್ದಾರೆ.