* ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಎಲ್ಲಾ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ಎರಡು ದಿನ ರಜೆಯನ್ನು ನೀಡುವುದಾಗಿ ಕೇರಳ ಸರ್ಕಾರ ಘೋಷಣೆ ಮಾಡಿದೆ. ರಾಜ್ಯದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ನವೆಂಬರ್ 28 ರಂದು (ಗುರುವಾರ) ಈ ಆದೇಶ ಹೊರಡಿಸಿದ್ದಾರೆ.* "ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯರು ಎದುರಿಸುವ ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮುಟ್ಟಿನ ರಜೆಯನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ. * ಕೊಚ್ಚಿನ್ ವಿಶ್ವವಿದ್ಯಾನಿಲಯವು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದ ಅವರು ಕೇರಳದಲ್ಲಿ ಶಿಕ್ಷಣ ಕೇಂದ್ರವೊಂದು ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡಿರುವುದು ಮೊದಲು ಎಂದು ತಿಳಿಸಿದ್ದಾರೆ.* ಕೇರಳದ 100ಕ್ಕೂ ಹೆಚ್ಚು ಐಟಿಐ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಪ್ರಯೋಜನ ಪಡೆಯುವ ವಿದ್ಯಾರ್ಥಿಗಳ ನಿಖರ ಸಂಖ್ಯೆಯನ್ನು ಕಂಡುಹಿಡಿಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಶನಿವಾರ ಎಲ್ಲಾ ಐಟಿಐ ಕಾಲೇಜುಗಳಿಗೆ ರಜೆ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.* ಈ ಹಿನ್ನೆಲೆ ತರಬೇತಿ ಸಮಯವನ್ನು ಸರಿದೂಗಿಸಲು, ಐಟಿಐ ಶಿಫ್ಟ್ ಗಳನ್ನೂ ಮರುಹೊಂದಿಸಲಾಗುತ್ತದೆ. ಮೊದಲ ಪಾಳಿಯು ಬೆಳಿಗ್ಗೆ 7:30ರಿಂದ ಮಧ್ಯಾಹ್ನ 3 ರವರೆಗೆ ಮತ್ತು ಎರಡನೇ ಶಿಫ್ಟ್ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಇರುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.