* ಕರ್ನಾಟಕದಲ್ಲಿ ಅಂತರ್ಜಲದ ಬಳಕೆಯು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿಯ ವರದಿಯೊಂದು ತಿಳಿಸಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಅಂತರ್ಜಲದ ಬಳಕೆ ಪ್ರಮಾಣವು ಶೇಕಡ 2.22ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.* ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಜಿಲ್ಲೆಗಳಲ್ಲಿ ಅಂತರ್ಜಲವನ್ನು ಅತಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.* ಕರ್ನಾಟಕ ರಾಜ್ಯದ 6,580.96 ಚದರ ಕಿಲೋಮೀಟರ್ ಅಂತರ್ಜಲ ಪ್ರದೇಶವು 2022 ರಲ್ಲಿ ನಿರ್ಣಾಯಕ ಎಂದು ಘೋಷಿಸಲ್ಪಟ್ಟಿದ್ದರೆ, 2023 ರ ಅಂತ್ಯದ ವೇಳೆಗೆ ಅದು 10,443.17 ಚದರ ಕಿಲೋಮೀಟರ್ಗೆ ಏರಿದೆ ಎಂದು ಕರ್ನಾಟಕದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿವೆ. * ರಾಜ್ಯದ 237 ತಾಲ್ಲೂಕುಗಳಲ್ಲಿ ಅಂತರ್ಜಲದ ಬಳಕೆಯ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, 45 ತಾಲ್ಲೂಕುಗಳಲ್ಲಿ ಅಂತರ್ಜಲ ಬಳಕೆಯು ಅತಿಯಾಗಿದೆ. 144 ತಾಲ್ಲೂಕುಗಳಲ್ಲಿ ಅಂತರ್ಜಲ ಬಳಕೆಯು ಸುರಕ್ಷಿತ ಮಟ್ಟದಲ್ಲಿ ಇದೆ.* ರಾಜಸ್ಥಾನ, ಹರಿಯಾಣ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಂತರ್ಜಲದಲ್ಲಿ ಫ್ಲೋರೈಡ್ ಪ್ರಮಾಣವು ಮಿತಿ ಮೀರಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ದೇಶದ 440 ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್ ಪ್ರಮಾಣವು ಹೆಚ್ಚಿದೆ. ಸಂಗ್ರಹಿಸಲಾದ ಶೇಕಡ 20ರಷ್ಟು ಮಾದರಿಗಳಲ್ಲಿ ನೈಟ್ರೇಟ್ ಪ್ರಮಾಣವು ಮಿತಿಯನ್ನು ಮೀರಿದೆ ಎಂದು ವರದಿ ತಿಳಿಸಿದೆ.* 2019 ಮತ್ತು 2023ಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಯುರೇನಿಯಂ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಸಂಖ್ಯೆ ಇಳಿಕೆಯಾಗಿದೆ ಎಂಬ ಸಮಾಧಾನಕರ ಅಂಶವನ್ನು ವರದಿ ತಿಳಿಸಿದೆ. 2019ರಲ್ಲಿ 18 ಜಿಲ್ಲೆಗಳಲ್ಲಿ ಯುರೇನಿಯಂ ಹೆಚ್ಚಿದ್ದರೆ, 2023ರಲ್ಲಿ 10ಕ್ಕೆ ಇಳಿದಿದೆ. ಕೋಲಾರ, ರಾಯಚೂರು, ತುಮಕೂರು ಜಿಲ್ಲೆಗಳಲ್ಲಿ ಈ ಪ್ರಮಾಣ ಮಿತಿಗಿಂತ ಹೆಚ್ಚಿದೆ.