* ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸಮೀಪದ ಹುಲ್ಲುಗಾವಲಿನಲ್ಲಿ ಮಂಗಳವಾರ(ಏಪ್ರಿಲ್ 22) ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದು, 28 ಮಂದಿ ಸಾವಿಗೀಡಾಗಿದ್ದಾರೆ.* ಮೃತರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದು, ಇಬ್ಬರು ವಿದೇಶಿಗರು ಹಾಗೂ ಇಬ್ಬರು ಸ್ಥಳೀಯರಾಗಿದ್ದಾರೆ. * ಈ ದಾಳಿಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ. ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಡೆದ ಈ ದಾಳಿಯು ಇತ್ತೀಚಿನ ವರ್ಷಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಅತಿದೊಡ್ಡ ದಾಳಿಯಾಗಿದೆ ಎಂದು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.* ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಭಾರತ ಭೇಟಿಯ ಸಂದರ್ಭದಲ್ಲಿಯೇ ಈ ದಾಳಿ ನಡೆದಿದ್ದು, 2019ರ ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರದ ದೊಡ್ಡ ದಾಳಿ ಎನ್ನಲಾಗಿದೆ.* ಪಾಕಿಸ್ತಾನದಲ್ಲಿ ನೆಲೆಸಿರುವ ಲಷ್ಕರ್–ಎ–ತಯ್ಯಬಾ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ 'ದಿ ರೆಸಿಸ್ಟೆನ್ಸ್ ಫ್ರಂಟ್' ಈ ದಾಳಿಗೆ ಹೊಣೆ ಹೊತ್ತಿದೆ.* ಭಯೋತ್ಪಾದಕರು ಜಮ್ಮುವಿನ ಕಿಶ್ತವಾಢದಿಂದ ಬೈಸರನ್ ಕಡೆಗೆ ಹೋಗುತ್ತಿದ್ದಾಗ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದ ಭೇಟಿಯಲ್ಲಿ ಇದ್ದಾಗ ಈ ದಾಳಿಯ ಮಾಹಿತಿ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.* ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ಮೊದಲು ಸ್ಥಳದಲ್ಲಿ ಶಾಂತಿ ಮನೆಮಾಡಿದ್ದರೂ, ಗುಂಡಿನ ಮೊರೆತ ಕೇಳಿದ ಕೂಡಲೇ ಜನರಲ್ಲಿ ಭೀತಿ ಮನೆ ಮಾಡಿತು. ಜನರು ರಕ್ಷಣೆಗಾಗಿ ಓಡಿದರು, ಆದರೆ ಬಯಲು ಪ್ರದೇಶವಾಗಿದ್ದರಿಂದ ಅಡಗಲು ಆಗಲಿಲ್ಲ ಎಂದು ತಿಳಿದು ಬಂದಿದೆ. ದಾಳಿಯಲ್ಲಿ ಐದು ಮಂದಿ ಭಾಗಿಯಾಗಿದ್ದರೆಂದು ಹೇಳಲಾಗಿದೆ.* ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಸೇರಿದಂತೆ ಇಬ್ಬರು ಕನ್ನಡಿಗರು ಮೃತಪಟ್ಟಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು ಸಚಿವ ಸಂತೋಷ್ ಲಾಡ್ ನೇತೃತ್ವದ ತಂಡ ಪಹಲ್ಗಾಮ್ಗೆ ತೆರಳುತ್ತಿದೆ.