* ಪವನ ಮತ್ತು ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವು ಪ್ರಗತಿ ಸಾಧಿಸುತ್ತಿದೆ. ಸದ್ಯ ಜರ್ಮನಿಯನ್ನು ಹಿಂದಿಕ್ಕಿರುವ ಭಾರತ ವಿಶ್ವದ ಮೂರನೇ ಅತಿದೊಡ್ಡ ಪವನ ಮತ್ತು ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಬಗ್ಗೆ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.* 2024ರ ವರ್ಷದ ಏಪ್ರಿಲ್ನಲ್ಲಿ ದೇಶದ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 82.64 ಗಿಗಾವ್ಯಾಟ್ ಇತ್ತು. 2025ರ ಏಪ್ರಿಲ್ನಲ್ಲಿ ದೇಶದ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು 107.95 ಗಿಗಾವ್ಯಾಟ್ ತಲುಪಿದೆ. ಇದು ಶೇ.30.07ರಷ್ಟು ಬೆಳವಣಿಗೆಯಾಗಿದೆ ಎಂದು ಜೋಶಿ ಮಾಹಿತಿ ನೀಡಿದ್ದಾರೆ.* ಪವನ ವಿದ್ಯುತ್ನ ಸ್ಥಾಪಿತ ಸಾಮರ್ಥ್ಯವು ಕಳೆದ ತಿಂಗಳು 51.06 GW ಆಗಿತ್ತು. ಇದು ಕಳೆದ ವರ್ಷ ಏಪ್ರಿಲ್ನಲ್ಲಿ 46.16 GW ಇತ್ತು. ಕಳೆದ ವರ್ಷಕ್ಕೆ ಹೋಲಿಸಿದ್ರೆ ಇದು ಶೇಕಡಾ 10.6ರಷ್ಟು ಬೆಳವಣಿಗೆ ಕಂಡಿದೆ.* ಒಟ್ಟು ನವೀಕರಿಸಬಹುದಾದ ಇಂಧನ (ಪಳೆಯುಳಿಕೆಯೇತರ ಇಂಧನ) ಸ್ಥಾಪಿತ ಸಾಮರ್ಥ್ಯವು ಏಪ್ರಿಲ್ 2024ರಲ್ಲಿ 199.86 GW ನಿಂದ 2025ರ ಏಪ್ರಿಲ್ನಲ್ಲಿ 231.81 GWಗೆ ತಲುಪಿದೆ. ಇದು ವಾರ್ಷಿಕವಾಗಿ ಶೇಕಡಾ 16ರಷ್ಟು ಬೆಳವಣಿಗೆಯಾಗಿದೆ* ಉತ್ಪಾದನೆಯ ವಿಷಯದಲ್ಲಿ ಸೋಲಾರ್ ಮಾಡ್ಯೂಲ್ ಉತ್ಪಾದನೆಯು 2014ರಲ್ಲಿ 2 GWನಿಂದ 80 GWಗೆ ಬೆಳೆದಿದೆ. 2030ರ ವೇಳೆಗೆ 150 GW ತಲುಪುವ ಗುರಿಯನ್ನು ಹೊಂದಿದೆ. ಸೌರ ಪ್ರಗತಿಯ ಜೊತೆಗೆ ಪವನ ವಿದ್ಯುತ್ ಸಾಮರ್ಥ್ಯದಲ್ಲಿ 50 GW ಸಾಧನೆಯನ್ನು ಸಚಿವರು ಎತ್ತಿ ತೋರಿಸಿದರು. ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಗಳನ್ನು ಎತ್ತಿ ತೋರಿಸಿದ ಜೋಶಿ, 2030ರ ವೇಳೆಗೆ ಭಾರತವು 500 GW ಪಳೆಯುಳಿಕೆಯೇತರ ಇಂಧನ ಗುರಿಯನ್ನು ಸಾಧಿಸುವತ್ತ ಬಲವಾಗಿ ಸಾಗುತ್ತಿದೆ. ಇದರಲ್ಲಿ ಪ್ರಧಾನ ಮಂತ್ರಿಗಳು ಕಲ್ಪಿಸಿಕೊಂಡಂತೆ 292 GW ಸೌರಶಕ್ತಿಯೂ ಸೇರಿದೆ ಎಂದು ಸಚಿವ ಜೋಶಿ ವಿವರಿಸಿದರು.