* ಭಾರತೀಯ ಅಂಚೆ ಇಲಾಖೆ ಮೇ 1ರಿಂದ ಹೊಸ 'ಜ್ಞಾನ ಅಂಚೆ' ಸೇವೆಯನ್ನು ಆರಂಭಿಸುತ್ತಿದ್ದು, ಇದು ಪಠ್ಯಪುಸ್ತಕ, ಗೈಡ್ಗಳು ಹಾಗೂ ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಾಗಿದೆ.* ಈ ಹಿಂದೆ ಇಂತಹ ಪುಸ್ತಕಗಳನ್ನು 'ಬುಕ್ ಪ್ಯಾಕೆಟ್' ಮತ್ತು 'ಬುಕ್ ಪೋಸ್ಟ್' ಮೂಲಕ ಕಳುಹಿಸಲು ಅವಕಾಶವಿತ್ತು. ಆದರೆ, 2023ರಲ್ಲಿ ಅಂಚೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದ್ದು, 2024ರ ಜೂನ್ನಲ್ಲಿ 'ಬುಕ್ ಪ್ಯಾಕೆಟ್' ರದ್ದುಪಡಿಸಲಾಯಿತು ಮತ್ತು 'ಬುಕ್ ಪೋಸ್ಟ್' ಸೇವೆಯ ಹೆಸರು ಹಾಗೂ ದರಗಳಲ್ಲಿ ಬದಲಾವಣೆ ಮಾಡಲಾಗಿತ್ತು.* ಈ ಬದಲಾವಣೆಗಳಿಂದಾಗಿ ಪುಸ್ತಕ ರವಾನೆ ದುಬಾರಿಯಾಗಿ, ಪ್ರಕಾಶಕರು ಮತ್ತು ಅವರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಅಂಚೆ ಇಲಾಖೆಗೆ ಪತ್ರ ಬರೆದಿತ್ತು. ಇದಕ್ಕೆ ಪ್ರತಿಯಾಗಿ ಈಗ 'ಜ್ಞಾನ ಅಂಚೆ' ಸೇವೆ ಪರಿಚಯಿಸಲಾಗಿದೆ.* ಈ ಸೇವೆಯಲ್ಲಿ ಕಳುಹಿಸುವ ಪುಸ್ತಕಗಳ ಮೇಲೆ 'ಜ್ಞಾನ ಅಂಚೆ' ಎಂದು ಕಡ್ಡಾಯವಾಗಿ ನಮೂದಿಸಬೇಕು, ಕಳುಹಿಸುವ ಹಾಗೂ ಪಡೆಯುವವರ ಜತೆಗೆ ಪ್ರಕಾಶಕರ ಹೆಸರು ಮತ್ತು ವಿಳಾಸ ಕೂಡ ಇರಬೇಕು.* ಯಾವುದೇ ವಾಣಿಜ್ಯ ಉದ್ದೇಶದ ವಸ್ತುಗಳು ಅಥವಾ ಕರಪತ್ರಗಳನ್ನು ಸೇರಿಸಬಾರದು. ಈ ಸೇವೆಯಲ್ಲಿ 300 ಗ್ರಾಂ ರಿಂದ 5 ಕೆ.ಜಿ.ವರೆಗೆ ಪಾರ್ಸಲ್ಗಳಿಗೆ ಮಾತ್ರ ಅವಕಾಶವಿದೆ.* ಈ ಷರತ್ತುಗಳನ್ನು ಉಲ್ಲಂಘಿಸಿದ ಪಾರ್ಸಲ್ಗಳನ್ನು 'ಭಾರತೀಯ ಅಂಚೆ ಪಾರ್ಸಲ್' ಎಂದು ಪರಿಗಣಿಸಲಾಗುತ್ತದೆ ಮತ್ತು 'ಜ್ಞಾನ ಅಂಚೆ' ಹಾಗೂ 'ಪಾರ್ಸಲ್' ದರಗಳ ವ್ಯತ್ಯಾಸದ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ.