* ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಹತ್ಯೆಯಾದ ದಿನವನ್ನು ಭಾರತದಾದ್ಯಂತ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ.* ಜನವರಿ 30, 1948 ರಂದು ಸ್ವಾತಂತ್ರ್ಯ ಚಳವಳಿಯ ನಾಯಕ ಮಹಾತ್ಮ ಗಾಂಧಿ ಅವರನ್ನು ನವದೆಹಲಿಯಲ್ಲಿ ಹತ್ಯೆ ಮಾಡಲಾಯಿತು. 1949 ರಲ್ಲಿ ಭಾರತ ಸರ್ಕಾರವು ಗಾಂಧಿಯವರ ಮರಣ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಅಪಾರ ಕೊಡುಗೆಗಳನ್ನು ಸ್ಮರಿಸಲು ಈ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿತು. ಅಂದಿನಿಂದ ಜನವರಿ 30 ರಂದು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.* ಮೋಹನದಾಸ ಕರಮಚಂದ ಗಾಂಧಿ (೧೮೬೯) ಗುಜರಾತಿನ ಪೋರಬಂದರಿನಲ್ಲಿ ಜನಿಸಿದರು. ಅವರು ಜೀವನದ ಆರಂಭದಲ್ಲಿ ಭೋಗಿಯಾಗಿ ಬದುಕಿ, ನಂತರ ಯೋಗಿಯಾಗಿ ಮಾರ್ಪಟ್ಟರು. ಸತ್ಯಕ್ಕಾಗಿ ಜೀವನವನ್ನೇ ಮೀಸಲಿಟ್ಟ ಅವರು, ತಮ್ಮ ಬದುಕೇ ತಮ್ಮ ಸಂದೇಶವೆಂಬ ಆತ್ಮವಿಶ್ವಾಸದಿಂದ ರಾಷ್ಟ್ರಪಿತನಾದರು.* ಬಿರ್ಲಾ ಹೌಸ್ ಗೆ ಪ್ರಾರ್ಥನೆಗೆಂದು ತೆರಳಿದ್ದ ಗಾಂಧೀಜಿ ಅವರ ಮೇಲೆ ನಾಥುರಾಮ್ ಗೋಡ್ಸೆ ಮೂರು ಬಾರಿ ಗುಂಡಿಕ್ಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ದಿನವನ್ನು ಗಾಂಧಿಯವರ ಸ್ಮರಣಾರ್ಥವಾಗಿ ಮಾತ್ರವಲ್ಲದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಶೌರ್ಯವನ್ನು ನೆನಪಿಸಲಾಗುತ್ತದೆ.